Connect with us

LATEST NEWS

ಹುತಾತ್ಮ ವೀರಯೋಧ ಕ್ಯಾಪ್ಟನ್‌ ಅನ್ಶುಮನ್‌ ಸಿಂಗ್‌ ಗೆ ಕೀರ್ತಿ ಚಕ್ರ ಪುರಸ್ಕಾರ – ಚಿಕ್ಕ ವಯಸ್ಸಿನ ವಿಧವೆ ನೋಡಿ ಸ್ವತಃ ಸಂತೈಸಿದ ರಾಷ್ಟ್ರಪತಿ

ದೆಹಲಿ ಜೂನ್ 06: ಚಿಕ್ಕವಯಸ್ಸಿಗೆ ತನ್ನ ಗಂಡನನ್ನು ಕಳೆದುಕೊಂಡ ಯೋಧರೊಬ್ಬರ ಪತ್ನಿ ರಾಷ್ಟ್ರಪತಿಯವರಿಂದ ಕೀರ್ತಿ ಚಕ್ರ ಪುರಸ್ಕಾರ ಪಡೆಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಎಂತವರನ್ನು ಒಂದು ಕ್ಷಣ ಭಾವುಕರನ್ನಾಗಿಸುತ್ತೆ.


ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭ ಇಂತಹ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಕಳೆದ ವರ್ಷದ ಜುಲೈನಲ್ಲಿ ಲಡಾಕ್‌ನ ಸಿಯಾಚಿನ್‌ ಗ್ಲೇಸಿಯರ್‌ನಲ್ಲಿ ಆರ್ಮಿ ಬಂಕರ್‌ನಲ್ಲಿ ಬೆಂಕಿ ಬಿದ್ದಿತ್ತು. ಶಾರ್ಟ್‌ ಸರ್ಕ್ಯೂಟ್‌ನಿಂದ ಸಾಕಷ್ಟು ಟೆಂಟ್‌ಗಳು ಸುಟ್ಟು ಕರಕಲಾಗಿದ್ದವು. ಈ ಹಂತದಲ್ಲಿ ಸೇನೆಯಲ್ಲಿ ವೈದ್ಯರಾಗಿದ್ದ 26 ವರ್ಷದ ಕ್ಯಾಪ್ಟನ್‌ ಡಾ. ಅನ್ಶುಮನ್‌ ಸಿಂಗ್‌, ತನ್ನ ಸ್ನೇಹಿತರನ್ನು ರಕ್ಷಣೆ ಮಾಡುವುದರೊಂದಿಗೆ ಸಿಯಾಚಿನ್‌ನಲ್ಲಿ ಬದುಕಲು ಬೇಕಾದ ಅಗತ್ಯ ವೈದ್ಯಕೀಯ ವಸ್ತುಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದರು. ಆದರೆ, ಇದನ್ನು ರಕ್ಷಣೆ ಮಾಡುವ ಸಮಯಲ್ಲಿ ತೀವ್ರ ಸ್ವರೂಪದಲ್ಲಿ ಅವರು ಬೆಂಕಿಯಿಂದ ಸುಟ್ಟುಹೋಗಿದ್ದರು. ಅನ್ಶುಮನ್‌ರೊಂದಿಗೆ ಇನ್ನೂ ಮೂವರು ಕೂಡ ಬಂಕರ್‌ನ ಒಳಗಿನ ಹೊಗೆ ಹಾಗೂ ಬೆಂಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಏರ್‌ಲಿಫ್ಟ್‌ ಮಾಡಲಾಯಿತಾದರೂ ಅನ್ಶುಮನ್‌ ಚಿಕಿತ್ಸೆಗೆ ಸ್ಪಂದಿಸದೆ ಸಾವು ಕಂಡಿದ್ದರು.


ಇದೀಗ ಮರಣೋತ್ತರವಾಗಿ ಕೀರ್ತಿ ಚಕ್ರ ಪುರಸ್ಕಾರಕ್ಕೆ ಭಾಜನರಾದ ಕ್ಯಾಪ್ಟನ್‌ ಅನ್ಶುಮನ್‌ ಸಿಂಗ್‌ ಕುಟುಂಬದ ಹೆಸರು ಕರೆಯುತ್ತಿದ್ದಂತೆ ಅವರ ಪತ್ನಿ ಸೃಷ್ಠಿ ಸಿಂಗ್ ಅನ್ಶುಮನ್‌ ಸಿಂಗ್‌ ಅವರ ತಾಯಿಯ ಜೊತೆ ಪುರಸ್ಕಾರ ಪಡೆಯಲು ಆಗಮಿಸಿದ್ದರು. ಈ ವೇಳೆ ದೇಶದ ರಕ್ಷಣಾಮಂತ್ರಿ ರಾಜ್‌ನಾಥ್‌ ಸಿಂಗ್‌ ಅವರು ಕೂಡ ಒಮ್ಮೆ ಭಾವುಕರಾದಂತೆ ಕಂಡು ಬಂದಿದ್ದು. ರಾಷ್ಟ್ರಪತಿ ಎದುರಿಗೆ ಬಂದು ನಿಂತಾಗ ಮದುವೆಯಾಗಿ ಬರೀ 5 ತಿಂಗಳಲ್ಲೇ ಗಂಡನನ್ನು ಕಳೆದುಕೊಂಡ ಸೃಷ್ಟಿ ಸಿಂಗ್‌ ಮುಖದಲ್ಲಿ ಶೋಕ ಮಡುಗಟ್ಟಿತ್ತು.


ಗಂಡನ ವೀರತೆಯನ್ನು ನಿರೂಪಕರು ತಿಳಿಸುತ್ತಿರುವಾಗಲೇ ಆಕೆಯ ಕಣ್ಣಲ್ಲಿ ಇನ್ನೇನು ಕಣ್ಣೀರು ಬರುವ ಹಾದಿಯಲ್ಲಿತ್ತು. ಆದರೆ, ಗಟ್ಟಿಗಿತ್ತು ಆಕೆ ಎಲ್ಲವನ್ನು ತಡೆದುಕೊಂಡು ನಿಂತಿದ್ದಳು. ಕೀರ್ತಿಚಕ್ರ ಪುರಸ್ಕಾರ ನೀಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಕೆಯ ಬಳಿ ಬಂದು ಪದಕವನ್ನು ಆಕೆಗೆ ಹಸ್ತಾಂತರ ಮಾಡಿದರು. ಹಸ್ತಾಂತರ ಮಾಡಿದ ಬಳಿಕ ಸೃಷ್ಟಿ ಸಿಂಗ್‌ ಅವರ ಕೈಗಳನ್ನು ಹಿಡಿದು ಸಂತೈಸುವ ಪ್ರಯತ್ನ ಮಾಡಿದರು.
ಮೂಲತಃ ಇಂಜಿನಿಯರ್‌ ಆಗಿರುವ ಸೃಷ್ಟಿ ಸಿಂಗ್‌, 2023ರ ಫೆಬ್ರವರಿಯಲ್ಲಿ ಅನ್ಶುಮನ್‌ರನ್ನು ವಿವಾಹವಾಗಿದ್ದರು. ಮೂಲತಃ ಪಂಜಾಬ್‌ನ ಪಠಾನ್‌ಕೋಟ್‌ನವರಾದ ಸೃಷ್ಟಿ ಸಿಂಗ್‌, ಅನ್ಶುಮನ್‌ ಅವರ ಸಹೋದರಿ ಡಾ. ತಾನ್ಯಾ ಸಿಂಗ್‌ ಅವರೊಂದಿಗೆ ನೋಯ್ಡಾದಲ್ಲಿಯೇ ವಾಸವಾಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *