ಶಿವಮೊಗ್ಗ ಜುಲೈ 06: ಎರಡು ಕಾರುಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನಪ್ಪಿದ ಘಟನೆ ಮುದ್ದಿನಕೊಪ್ಪ ಲಯನ್‌ ಸಫಾರಿ ಬಳಿ ನಡೆದಿದೆ. ಅಪಘಾತದ ತೀವೃತೆಗೆ ಸ್ವಿಪ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.


ಶಿವಮೊಗ್ಗದಿಂದ ಹೋಗುತ್ತಿದ್ದ ಇನ್ನೋವಾ ಕಾರು ಹಾಗೂ ಸ್ವಿಫ್ಟ್‌ ಕಾರು ನಡುವೆ ಅಪಘಾತ ಸಂಭವಿಸಿದೆ‌. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ.  ಮೃತರನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಹೊಸ ದೊಡ್ಡೇರಿ ಗ್ರಾಮದ ಇಮಾಮ್ ಸಾಬ್, ಚಂದ್ರಶೇಖರ ಹಾಗೂ ಸಿದ್ದಪ್ಪ  ಎಂದು ಗುರುತಿಸಲಾಗಿದೆ.  ತಾಲ್ಲೂಕಿನ ಆಯನೂರಿನಿಂದ ಶಿವಮೊಗ್ಗದತ್ತ ಬರುತ್ತಿದ್ದ ಸ್ವಿಫ್ಟ್ ಕಾರು ಶಿವಮೊಗ್ಗದ ಕಿಮ್ಮನೆ ಗಾಲ್ಫ್ ರೆಸಾರ್ಟ್‌ ನಿಂದ ಜೋಗದತ್ತ ತೆರಳುತ್ತಿದ್ದ ಇನ್ನೊವಾ ನಡುವೆ ಡಿಕ್ಕಿ ಸಂಭವಿಸಿದೆ. ಇನ್ನೊವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿದೇಶಿಯರು ಸೇರಿದಂತೆ ಐವರಿಗೆ ಗಾಯಗಳಾಗಿವೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳ ವಿವರ ತಿಳಿದುಬರಬೇಕಿದೆ.

ಅಪಘಾತದಿಂದ ಕಾರುಗಳು ನಜ್ಜುಗುಜ್ಜಾಗಿದ್ದು, ಇನ್ನೊವಾದಲ್ಲಿ ಏರ್‌ ಬ್ಯಾಗ್ ತೆರೆದಿದ್ದರಿಂದ ಒಳಗಿದ್ದವರಿಗೆ ಹೆಚ್ಚಿನ ಗಾಯ ಆಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information