KARNATAKA
ಬಾವಿಯಲ್ಲಿ ಬುಲೆಟ್ ಬೈಕ್ ಪತ್ತೆ: ಬುಲೆಟ್ ಬೈಕ್ ಸುತ್ತ ಅನುಮಾನದ ಹುತ್ತ!
ಚಿಕ್ಕಬಳ್ಳಾಪುರ: ಬಾವಿಯಲ್ಲಿನ ನೀರನ್ನ ಕೃಷಿ ಚಟುವಟಿಕೆಗೆ ಬಳಸಿಕೊಳ್ಳಲು ಹೋದ ರೈತನಿಗೆ ಶಾಕ್ ಆಗಿದೆ. ಬಾವಿ ನೀರಲ್ಲಿ ಬುಲೆಟ್ ಬೈಕೊಂದು ಪತ್ತೆಯಾಗಿದೆ.
ಅಂದಹಾಗೆ ಈ ಘಟನೆ ನಡೆದಿರೋದು ಚಿಕ್ಕಬಳ್ಳಾಪುರ ತಾಲೂಕಿನ ಹರಿಹರಪುರದ ಬಳಿ. ಚಿಕ್ಕಬಳ್ಳಾಪುರ-ಆವಲಗುರ್ಕಿಯ ಈಶಾ ಮಾರ್ಗದ ಬಳಿಯ ಹರಿಹರಪುರ ಗ್ರಾಮದ ಬಳಿ ರಸ್ತೆ ಬದಿ ರೈತ ಪಾಪಣ್ಣ ಎಂಬುವವರ ಜಮೀನನಲ್ಲಿರೋ ಪಾಳು ಬಾವಿಯಲ್ಲಿ ಈ ಬುಲೆಟ್ ಬೈಕ್ ಪತ್ತೆಯಾಗಿದೆ.
ರೈತ ಪಾಪಣ್ಣ ಪಕ್ಕದ ತೋಟದ ರೈತರೊಬ್ಬರು ತಮ್ಮ ಬೆಳೆಗೆ ನೀರು ಹಾಯಿಸೋಕೆ ಅಂತ ಬಾವಿಯ ನೀರನ್ನ ಮೇಲೆತ್ತಲು ಮೋಟಾರು ಬಿಡಲು ಹೋದಾಗ ಬಾವಿಯಲ್ಲಿ ಬೈಕ್ ಕಾಣಿಸಿದೆ. ಅರೇ ಇದೇನಪ್ಪಾ ಅಂತ ಭಯದಿಂದ ನೀರನ್ನೆಲ್ಲಾ ಖಾಲಿ ಮಾಡಿ ಬೈಕ್ ಮೇಲೆತ್ತುವ ಪ್ರಯತ್ನ ನಡೆಸಿದ್ದಾರೆ.
ಈ ಬಾವಿಯಲ್ಲಿನ ನೀರನ್ನ ಕೃಷಿಗೆ ಬಳಸುತ್ತಿರಲಿಲ್ಲ. ಬಾವಿಯಿದ್ದ ಜಮೀನಿನಲ್ಲಿ ಯಾವುದೇ ಬೆಳೆ ಸಹ ಬೆಳೆಯುತ್ತರಲಿಲ್ಲ. ಆದ್ರೆ ಪಕ್ಕದ ಜಮೀನಿನವರು ಬೆಳೆಗೆ ನೀರು ಹಾಯಿಸಲು ಟ್ರಾನ್ಸ್‌ಫಾರ್ಮರ್ ಕೈ ಕೊಟ್ಟಿದೆ. ಇದ್ರಿಂದ ಕೊಳವೆಬಾವಿಯ ನೀರು ಮೇಲತ್ತಾಲಾಗದೇ ಬಾವಿಯಲ್ಲಿನ ನೀರು ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಬುಲೆಟ್ ಬೈಕ್ ಕಾಣಿಸಿದೆ. ಹಾಗಾಗಿ ಬೆಳಗ್ಗೆಯಿಂದಲೂ ಬಾವಿಯಲ್ಲಿನ ನೀರನ್ನ ಹೊರಹಾಕಿ ಬೈಕ್ ಮೇಲೆ ಎತ್ತಲು ಹರಸಾಹಸ ಪಟ್ಟಿದ್ದಾರೆ. ಹಗ್ಗ ಕಟ್ಟಿ ಬುಲೆಟ್ ಬೈಕ್ ಮೇಲೆ ತರುವ ಪ್ರಯತ್ನ ಮಾಡಲಾಗುತ್ತಿದ್ದು ಪದೇ ಪದೇ ಹಗ್ಗ ಕಟ್ ಆಗಿ ಬೈಕ್ ನೀರಿಗೆ ಬೀಳುತ್ತಿದೆ. ಘಟನೆಯಿಂದ ಜನ ಸಹ ಆತಂಕಕ್ಕೀಡಾಗಿದ್ದಾರೆ.
ಇನ್ನೂ ಬೈಕ್ ಮೇಲೆ ತರಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸಪಟ್ಟಿದ್ದು ಪ್ರಯತ್ನಗಳು ವಿಫಲ ಆಗ್ತಿವೆ. ಬೈಕ್ ಮೇಲೆ ಬಂದ ನಂತರ ಅದರ ನಂಬರ್ ಅಥವಾ ಚಾರ್ಸಿ ನಂಬರ್ ಆಧರಿಸಿ ಬೈಕ್ ಯಾರದ್ದು ಯಾಕೆ ಹೇಗೆ ಬಾವಿಗೆ ಬಂತು ಅನ್ನೋದರ ತನಿಖೆ ನಡೆಸಬೇಕಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ತನಿಖೆಯಿಂದಷ್ಟೇ ಬಾವಿಯಲ್ಲಿನ ಬುಲೆಟ್ ನ ಆಸಲಿ ಸತ್ಯಾಂಶ ಹೊರಬರಬೇಕಿದೆ.