BANTWAL
ಬ್ರಹ್ಮರಕೊಟ್ಲು ಟೋಲ್ ಗೇಟ್ ಸಿಬ್ಬಂದಿಯಿಂದ ಲಾರಿ ಡ್ರೈವರ್ ಮೇಲಿನ ಹಲ್ಲೆ ಅಮಾನವೀಯ ಕೃತ್ಯ : SDPI
ಬಂಟ್ವಾಳ ಜನವರಿ 18: ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲುವಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ, ಅವೈಜ್ಞಾನಿಕವಾಗಿ ಕಾರ್ಯಾಚರಿಸುತ್ತಿರುವ ಟೋಲ್ ಪ್ಲಾಜಾ ಕಳೆದ ಹಲವು ವರ್ಷಗಳಿಂದ ಹಗಲು ದರೋಡೆ ನಡೆಸುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಮಾತ್ರವಲ್ಲದೆ ಇಲ್ಲಿನ ಟೋಲ್ ಸಿಬ್ಬಂದಿಗಳು ಈ ಹಿಂದೆ ಹಲವು ಬಾರಿ ವಾಹನ ಚಾಲಕರಿಗೆ ಅದರಲ್ಲೂ ಮಹಿಳೆಯರೆಂದು ನೋಡದೆ ಹಲ್ಲೆ ನಡೆಸಿ ತಮ್ಮ ದರ್ಪವನ್ನು ತೋರಿಸಿದ್ದಾರೆ.
ಈ ಬಗ್ಗೆ ಹಲವು ಬಾರಿ ಸ್ಥಳೀಯ ಪೊಲೀಸ್ ಸ್ಟೇಷನ್ ಗೆ ದೂರು ನೀಡಿದರು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಈಗ ಮತ್ತೆ ಟೋಲ್ ಸಿಬ್ಬಂದಿಯು ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ತೋರಿಸಿದ್ದಾರೆ ಇದು ಅಮಾನವೀಯ ಮತ್ತು ಅಕ್ಷಮ್ಯ ಅಪರಾಧ ಇದನ್ನು ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯು ಅತ್ಯಂತ ಕಟು ಶಬ್ದಗಳಲ್ಲಿ ಖಂಡಿಸುತ್ತದೆ ಎಂದು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಂಟ್ವಾಳ ಪುರಸಭಾ ಉಪಾಧ್ಯಕ್ಷರಾದ ಮೂನೀಶ್ ಅಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾತ್ರವಲ್ಲದೆ ಗೂಂಡಾಗಿರಿ ನಡೆಸಿದ ಟೋಲ್ ಸಿಬ್ಬಂದಿಯನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ ತಪ್ಪಿದ್ದಲ್ಲಿ ಎಲ್ಲಾ ನಾಗರಿಕರನ್ನು ಸೇರಿಸಿಕೊಂಡು ಟೋಲ್ ಗೇಟ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದೇವೆ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ