FILM
ಬಾಯ್ಕಾಟ್ ಬಾಲಿವುಡ್ – ಯೋಗಿ ಆದಿತ್ಯನಾಥ್ ಗೆ ಸಹಾಯ ಮಾಡಿ ಎಂದ ಸುನಿಲ್ ಶೆಟ್ಟಿ
ಮುಂಬೈ ಜನವರಿ 07: ಬಾಲಿವುಡ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಬಾಯ್ಕಾಟ್ ಬಾಲಿವುಡ ಟ್ರೆಂಡ್ ನಿಂದ ಬೇಸತ್ತಿದ್ದು, ಅದನ್ನು ನಿಲ್ಲಿಸುವಂತೆ ಖ್ಯಾತ ನಟ ಸುನಿಲ್ ಶೆಟ್ಟಿ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದ್ದಾರೆ.
ಎರಡು ದಿನಗಳ ಮುಂಬೈ ಪ್ರವಾಸದಲ್ಲಿದ್ದ ಸಿಎಂ ಆದಿತ್ಯನಾಥ್ ಅವರು ಬಾಲಿವುಡ್ ನಟ, ನಿರ್ಮಾಪಕರನ್ನು ಭೇಟಿ ಮಾಡಿದರು. ಸುನೀಲ್ ಶೆಟ್ಟಿ, ಸುಭಾಷ್ ಘಾಯ್, ಜಾಕಿ ಶ್ರಾಫ್, ರಾಜ್‌ಕುಮಾರ್ ಸಂತೋಷಿ, ಮನಮೋಹನ್ ಶೆಟ್ಟಿ ಮತ್ತು ಬೋನಿ ಕಪೂರ್ ಅವರಂತಹ ಚಿತ್ರರಂಗದ ಪ್ರಮುಖರನ್ನು ಭೇಟಿ ಮಾಡಿ ನೋಯ್ಡಾ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮತ್ತು ಹೂಡಿಕೆಯ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು.
61 ವರ್ಷದ ನಟ, ‘ಬಾಲಿವುಡ್ ಬಹಿಷ್ಕರಿಸಿ’ ಪ್ರವೃತ್ತಿಯನ್ನು ತೊಡೆದುಹಾಕಲು ನೀವು ಅದರ ಬಗ್ಗೆ ಏನಾದರೂ ಹೇಳಿ, ನಿಮ್ಮ ಮಾತಿನಿಂದ ಅದು ನಿಲ್ಲಬಹುದು. ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂದರು. ನಾವು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ. ಇತರರಿಗೆ ಹಾನಿ ಮಾಡುವುದಿಲ್ಲ. ಇಂದು ಜನರು ಬಾಲಿವುಡ್ ಸರಿಯಿಲ್ಲ ಎಂದು ಭಾವಿಸಿದ್ದಾರೆ. ಆದರೆ ನಾವು ಇಲ್ಲಿ ಸಾಕಷ್ಟು ಉತ್ತಮ ಚಿತ್ರಗಳನ್ನು ಮಾಡಿದ್ದೇವೆ. ಅಂತಹ ಒಂದು ಚಿತ್ರ ‘ಬಾರ್ಡರ್’ ನಲ್ಲಿ ನಾನು ಸಹ ಭಾಗವಾಗಿದ್ದೇನೆ ಎಂದು ಯೋಗಿ ಆದಿತ್ಯನಾಥರನ್ನು ಕೇಳಿಕೊಂಡರು.
ಬಾಲಿವುಡ್ ಗೆ ಅಂಟಿಕೊಂಡಿರುವ ಕಳಂಕವನ್ನು ಹೋಗಲಾಡಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬೆಂಬಲವನ್ನು ಪಡೆಯಲು ಆದಿತ್ಯನಾಥ್ ಅವರನ್ನು ವಿನಂತಿಸಿದರು. ‘ಈ ಕಳಂಕವನ್ನು ನೋಡಿ ನನಗೆ ನೋವಾಗಿದೆ. ಇಲ್ಲಿನ ಶೇಕಡ ತೊಂಬತ್ತೊಂಬತ್ತು ಜನರು ಒಳ್ಳೆಯವರಾಗಿದ್ದಾರೆ. ಆದ್ದರಿಂದ, ಯೋಗಿ ಜೀ, ದಯವಿಟ್ಟು ಈ ಕಳಂಕವನ್ನು ತೊಡೆದುಹಾಕುವ ಬಗ್ಗೆ ನಮ್ಮ ಪ್ರಧಾನಿಯವರೊಂದಿಗೆ ಮಾತನಾಡಲು ಮುಂದಾಳತ್ವ ವಹಿಸಿ” ಎಂದು ಅವರು ಹೇಳಿದರು. ಭಾರತವನ್ನು ಪ್ರಪಂಚದೊಂದಿಗೆ ಸಂಪರ್ಕಿಸುವಲ್ಲಿ ಚಲನಚಿತ್ರೋದ್ಯಮವು ಪ್ರಮುಖ ಪಾತ್ರ ವಹಿಸಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ತಮ್ಮ ಪ್ರಭಾವವನ್ನು ಬಳಸಿ ‘ಬಾಲಿವುಡ್ ಬಹಿಷ್ಕಾರ’ ಪ್ರವೃತ್ತಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು.