LATEST NEWS
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಅಶ್ಲೀಲ ವರ್ತನೆ, ಭಟ್ಕಳದ ಯುವಕ ಶುರೈಮ್ ಬಂಧನ..!
ಉಡುಪಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಅಶ್ಲಿಲವಾಗಿ ವರ್ತಿಸಿದ್ದ ಯುವಕನನ್ನು ಮಣಿಪಾಲ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಭಟ್ಕಳ ಮೂಲದ ಶುರೈಮ್ (22) ಬಂಧಿತ ಆರೋಪಿಯಾಗಿದ್ದಾನೆ.
ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದ ಉಡುಪಿ ಮೂಲದ ಯುವತಿ ಬೆಂಗಳೂರಿನಿಂದ ಉಡುಪಿಗೆ 2 ದಿನಗಳ ಹಿಂದೆ ಪ್ರಯಾಣ ಬೆಳೆಸಿದ್ದಳು. ರೈಲು ಮೂಲ್ಕಿ ಸಮೀಪ ಬರುತ್ತಿದ್ದ ವೇಳೆ ರೈಲಿನಲ್ಲಿದ್ದ ಶುರೈಮ್ ಯುವತಿಯ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದು, ಆತ ಅಲ್ಲಿಯೇ ಕ್ಷಮೆಯಾಚಿಸಿದ್ದ ಎನ್ನಲಾಗಿದೆ. ಯುವತಿ ಈ ಬಗ್ಗೆ ರೈಲ್ವೇ ಆ್ಯಪ್‌ನಲ್ಲಿ ದೂರು ದಾಖಲಿಸಿದ್ದು, ಉಡುಪಿಗೆ ಬಂದಿಳಿದ ಬಳಿಕ ರೈಲ್ವೇ ಪೊಲೀಸರ ಗಮನಕ್ಕೂ ತಂದಿದ್ದರು. ಅಲ್ಲದೇ ಮಣಿಪಾಲ ಠಾಣಾ ಪೊಲೀಸರಿಗೂ ಘಟನೆಯ ಸಂಬಂಧಿಸಿ ಮಾಹಿತಿಯನ್ನು ನೀಡಲಾಗಿತ್ತು. ರೈಲಿನಲ್ಲಿ ಯುವತಿ ಆರೋಪಿಯ ಫೋಟೊ ಕೂಡಾ ತನ್ನ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡಿದ್ದಳು. ಈ ಬಗ್ಗೆ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸರು ಎಲ್ಲಾ ಮಾಹಿತಿಯನ್ನು ಕ್ರೋಢಿಕರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login