Connect with us

KARNATAKA

ಬೆಂಗಳೂರು ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಬರುವುದಿಲ್ಲ – ಆಮಂತ್ರಣ ಪತ್ರಿಕೆ ಬದಲಾಯಿಸುತ್ತೇವೆ – ಅಶೋಕ್ ರೈ

ಬೆಂಗಳೂರು ನವೆಂಬರ್ 21: ಕಂಬಳ ಕಾರ್ಯಕ್ರಮಕ್ಕೆ ಮಹಿಳಾ ಕುಸ್ತಿ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಆಹ್ವಾನಿಸಿರುವುದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೆ ಇದೀಗ ಪುತ್ತೂರು ಕಾಂಗ್ರೆಸ್‌ ಶಾಸಕ ಮತ್ತು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ಉಲ್ಟಾ ಹೊಡೆದಿದ್ದು, ಇದೀಗ ಅವರು ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ ಎಂದು ತಿಳಿಸಿದ್ದಾರೆ.


ನವೆಂಬರ್ 25 ಮತ್ತು 26ರಂದು ಅರಮನೆ ಮೈದಾನದಲ್ಲಿ ಕಂಬಳ ಆಯೋಜನೆಗೊಂಡಿದೆ. ಈ ವೇಳೆ ಕುಸ್ತಿಪಟುಗಳಿಗೆ ನಡೆಯಲಿರುವ ಸನ್ಮಾನ ಕಾರ್ಯಕ್ರಮಕ್ಕೆ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು. ಈ ಹಿನ್ನಲೆ ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಸೇರಿಸಲಾಗಿತ್ತು, ಆದರೆ ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು, ಮಹಿಳಾ ಕುಸ್ತಿ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವನ್ನು ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಎದುರಿಸುತ್ತಿದ್ದು ಅವರನ್ನು ಕಂಬಳಕ್ಕೆ ಕರೆದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ಈ ವಿವಾದದ ಬಗ್ಗೆ ಮಾತನಾಡಿದ ಶಾಸಕ ಅಶೋಕ್ ರೈ ಇದು ದೊಡ್ಡ ಕಾರ್ಯಕ್ರಮ ಆಗಿರುವ ಕಾರಣ ಬೇರೆ ಬೇರೆ ಸಂಘಟನೆಯವರು ಬಂದು ಅನೇಕ ಮನವಿ ಮಾಡುತ್ತಾರೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬಂದು ವೇದಿಕೆಗೆ ಅವರ ಹೆಸರನ್ನು ಇಡಲು ಹೇಳುತ್ತಾರೆ. ಸಿದ್ದಿ ಜನಾಂಗದವರು ಬಂದು ಅವರನ್ನು ಆಹ್ವಾನಿಸುವಂತೆ ಕೇಳಿದ್ದರು. ಆದರೆ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಮೊನ್ನೆಯೇ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರಿದೆ. ಈಗ ನಾವು ಆಹ್ವಾನ ಪತ್ರಿಕೆಯನ್ನು ಬದಲಾಯಿಸುತ್ತೇವೆ. ಕಂಬಳದಲ್ಲಿ ಕಾಂಗ್ರೆಸ್‌, ಬಿಜೆಪಿಯವರು ಇದ್ದಾರೆ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದರು.

Share Information
Advertisement
Click to comment

You must be logged in to post a comment Login

Leave a Reply