Connect with us

FILM

ಮದುವೆಯಾದ ಕೆಲವೇ ತಾಸುಗಳಲ್ಲಿ ಪೊಲೀಸ್ ಠಾಣೆಯಲ್ಲಿ ಬಿಗ್‌ಬಾಸ್‌ ಸ್ಪರ್ಧಿ ಚೈತ್ರಾ ಕೋಟೂರು

ಕೋಲಾರ: ಬಿಗ್‌ಬಾಸ್‌ 7ನೇ ಆವೃತ್ತಿಯಲ್ಲಿ ಸ್ಪರ್ಧಿ ಚೈತ್ರಾ ಕೋಟೂರು ಅವರ ಸರಳ ಮದುವೆ ಕೆಲವೇ ಗಂಟೆಗಳಲ್ಲಿ ಮುರಿದು ಬಿದ್ದಿದೆ.


ರಿಯಲ್‌ ಎಸ್ಟೇಟ್‌ ಉದ್ಯಮಿ ನಾಗಾರ್ಜುನ್‌ ಅವರನ್ನು ದೇವಸ್ಥಾನ ಒಂದರಲ್ಲಿ ಸರಳವಾಗಿ ಮದುವೆಯಾದ ಚೈತ್ರಾ ಕೋಟೂರು, ಮದುವೆಯಾಗಿ ಸಂಜೆಯಾಗುತ್ತಲೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ದಂಪತಿಯ ಸಂಬಂಧದಲ್ಲಿ ಬಿರುಕು ಮೂಡಿದೆ.


ಕೋಲಾರ ಜಿಲ್ಲೆಯ ಚೈತ್ರಾ ಮತ್ತು ಮಂಡ್ಯ ಜಿಲ್ಲೆಯ ನಾಗಾರ್ಜುನ್‌ ಬೆಂಗಳೂರಿನ ಬ್ಯಾಟರಾಯನಪುರದ ಗಣೇಶ ದೇವಸ್ಥಾನದಲ್ಲಿ ಭಾನುವಾರ ಮದುವೆಯಾಗಿದ್ದರು. ಬಳಿಕ ಕೋಲಾರಕ್ಕೆ ಬಂದ ನವ ದಂಪತಿಯು ಸಂಜೆ ವೇಳೆಗೆ ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಗೆ ಪರಸ್ಪರ ದೂರು ಕೊಟ್ಟಿದ್ದಾರೆ. ನನಗೆ ಚೈತ್ರಾ ಅವರನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ, ಕೆಲ ಸಂಘಟನೆಗಳ ಸದಸ್ಯರು ನನ್ನನ್ನು ಗೃಹ ಬಂಧನದಲ್ಲಿಟ್ಟು ಬೆದರಿಸಿ ಬಲವಂತವಾಗಿ ಅವರೊಂದಿಗೆ ಮದುವೆ ಮಾಡಿಸಿದ್ದಾರೆ ಎಂದು ನಾಗಾರ್ಜುನ್‌ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.


ನಂತರ ಪೊಲೀಸರು ರಾತ್ರಿ ಎರಡೂ ಕುಟುಂಬ ಮತ್ತು ನವ ದಂಪತಿಯ ವಿಚಾರಣೆ ನಡೆಸಿದ್ದರು. ಎರಡೂ ಕುಟುಂಬದವರಿಗೆ ಕುಳಿತು ಮಾತನಾಡಿ ನಿರ್ಧಾರಕ್ಕೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.


ಬುಧವಾರದೊಳಗೆ ನಿರ್ಧಾರವನ್ನ ತಿಳಿಸಬೇಕೆಂದು ಪೊಲೀಸರು ನವ ದಂಪತಿಗೆ ಸೂಚಿಸಿದ್ದಾರೆ. ತಡರಾತ್ರಿ ಚೈತ್ರಾ ಅವರನ್ನ ಕೋಲಾರದಲ್ಲಿಯೇ ಬಿಟ್ಟು ನಾಗಾರ್ಜುನ್ ತಮ್ಮ ಪೋಷಕರ ಜೊತೆ ಮಂಡ್ಯಕ್ಕೆ ತೆರಳಿದ್ದಾರೆ. ಸದ್ಯ ಚೈತ್ರಾ ಕೋಲಾರದಲ್ಲಿರುವ ತಮ್ಮ ಮನೆಗೆ ವಾಪಸ್ ಆಗಿದ್ದಾರೆ.