LATEST NEWS
ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ; ನಾಲ್ಕು ವರ್ಷಗಳ ಬಳಿಕ ಆರೋಪಿ ಜ್ಯೋತಿಷಿಗೆ ಷರತ್ತಿನ ಜಾಮೀನು
ಉಡುಪಿ, ಜೂನ್ 24: ಕರಾವಳಿಯಲ್ಲಿ ಸಂಚಲನ ಸೃಷ್ಟಿಸಿದ್ದ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಿರಂಜನ ಭಟ್ಟನಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ.
ನಿರಂಜನ್ ಭಟ್ ಪ್ರಕರಣದ ಮೂರನೇ ಆರೋಪಿಯಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾನೆ. ಎರಡು ದಿನಗಳ ಹಿಂದೆ ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದ ನಿರಂಜನ ಭಟ್ಟನ ತಂದೆ ಶ್ರೀನಿವಾಸ ಭಟ್ ತೀರಿಕೊಂಡಿದ್ದರು. ಸಾಕ್ಷ್ಯ ನಾಶದ ಆರೋಪದಲ್ಲಿ ಶ್ರೀನಿವಾಸ ಭಟ್ ಮತ್ತು ಡ್ರೈವರ್ ರಾಘವೇಂದ್ರ ಬಂಧಿತರಾಗಿದ್ದರೂ ಒಂದು ವಾರದಲ್ಲೇ ಬಿಡುಗಡೆಯಾಗಿದ್ದರು. ಇದೀಗ ಪ್ರಕರಣದಲ್ಲಿ ವಿಚಾರಣೆ ಮತ್ತಿತರ ಕಾರಣಗಳಿಂದ ನೊಂದಿದ್ದ ಶ್ರೀನಿವಾಸ ಭಟ್ (65) ಅನಾರೋಗ್ಯಕ್ಕೊಳಗಾಗಿ ಸಾವನ್ನಪ್ಪಿದ್ದರು. ತಂದೆಯ ಕಾರ್ಯ ನೆರವೇರಿಸುವುದಕ್ಕಾಗಿ ಇದೀಗ ಆತನ ವಕೀಲರು ನಿರಂಜನ ಭಟ್ಟನಿಗೆ ಜಾಮೀನು ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ವಾದ ಆಲಿಸಿದ ನ್ಯಾಯಾಲಯ ಐದು ಲಕ್ಷ ರೂ. ಬಾಂಡ್ ಪಡೆದು ಜುಲೈ 7ರ ವರೆಗೆ ಷರತ್ತುಬದ್ಧ ಜಾಮೀನು ನೀಡಿದೆ. ಜುಲೈ ಏಳು ಅಥವಾ ಅದಕ್ಕೂ ಮುನ್ನ ಕೋರ್ಟಿಗೆ ಹಾಜರಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಬೇಕು ಎಂದು ಸೂಚಿಸಿದೆ.
ಎ ವನ್ ಆರೋಪಿ ರಾಜೇಶ್ವರಿ ಶೆಟ್ಟಿಗೆ ಈಗಾಗಲೇ ಜಾಮೀನು ಸಿಕ್ಕಿದೆ. 2ನೇ ಆರೋಪಿಯಾಗಿರುವ ಆಕೆಯ ಪುತ್ರ ನವನೀತ ಶೆಟ್ಟಿ ಇನ್ನೂ ಜೈಲಿನಲ್ಲಿದ್ದಾನೆ.
ಉಡುಪಿ ಮತ್ತು ದುಬೈನಲ್ಲಿ ಮೆಡಿಕಲ್, ಹೊಟೇಲ್ ಉದ್ಯಮ ಹೊಂದಿದ್ದ ಭಾಸ್ಕರ ಶೆಟ್ಟಿಯನ್ನು 2016ರ ಜುಲೈ 28ರಂದು ಹತ್ಯೆ ಮಾಡಲಾಗಿತ್ತು. ಭಾಸ್ಕರ ಶೆಟ್ಟಿಯನ್ನು ಉಡುಪಿಯ ಇಂದ್ರಾಳಿಯ ಮನೆಯಲ್ಲಿ ಹತ್ಯೆಗೈದು ಶವವನ್ನು ಬೆಳ್ಮಣ್ಣಿಗೆ ಒಯ್ಯಲಾಗಿತ್ತು. ಅಲ್ಲಿ ಜ್ಯೋತಿಷಿಯಾಗಿದ್ದ ನಿರಂಜನ ಭಟ್ಟ ತನ್ನ ಹೋಮ ಕುಂಡದಲ್ಲಿ ಶವವನ್ನು ಹಾಕಿ ಸುಟ್ಟು ಹಾಕಿದ್ದ. ಜುಲೈ 29ರಂದು ಭಾಸ್ಕರ ಶೆಟ್ಟಿ ನಾಪತ್ತೆಯಾಗಿರುವ ಬಗ್ಗೆ ಅವರ ತಾಯಿ ಉಡುಪಿ ಠಾಣೆಗೆ ದೂರು ನೀಡಿದ್ದರು. ಪತಿ – ಪತ್ನಿಯ ನಡುವೆ ಆಸ್ತಿ ವಿಚಾರದಲ್ಲಿ ಜಗಳ ಆಗಿದ್ದ ಬಗ್ಗೆ ತಾಯಿ ನೀಡಿದ ಸುಳಿವು ಆರೋಪಿಗಳು ಸುಲಭದಲ್ಲಿ ಸಿಕ್ಕಿವೀಳುವಂತೆ ಮಾಡಿತ್ತು.