BANTWAL
ಬಂಟ್ವಾಳ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ : ಪ್ರಕರಣ ದಾಖಲು
ಬಂಟ್ವಾಳ, ಜುಲೈ 11 : ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಹಿತ ಕರ್ತವ್ಯನಿರತ ಸಿಬ್ಬಂದಿ ಮೇಲೆ ಕೈ ಮಾಡಿ ನಿಂದಿಸಿ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಉಮ್ಮರ್ ಫಾರೂಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಈತನ ಪತ್ನಿ ಬಂಟ್ವಾಳ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಒಳರೋಗಿಯಾಗಿ ದಾಖಲಾಗಿದ್ದರು. ಈ ವೇಳೆ ರಾತ್ರಿ ಸರಿಸುಮಾರು 11 ಗಂಟೆ ವೇಳೆಗೆ ಹೆಂಡತಿಯನ್ನು ನೋಡಬೇಕೆಂದು ಫಾರೂಕ್ ಕೇಳಿದ್ದಾನೆ. ಆದರೆ, ಆಸ್ಪತ್ರೆ ಸಿಬ್ಬಂದಿ ರಾತ್ರಿ ಸಮಯದಲ್ಲಿ ಮಹಿಳೆಯರ ವಾರ್ಡ್ಗೆ ಹೋಗಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರೂ ಫಾರೂಕ್ ಸಿಬ್ಬಂದಿಯನ್ನು ದೂಡಿ ಒಳಗೆ ಹೋಗಿದ್ದಾನೆ.
ಬಳಿಕ ಸಿಬ್ಬಂದಿ ಕರ್ತವ್ಯ ನಿರತ ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ವಾರ್ಡ್ ಬಳಿ ಬಂದ ವೈದ್ಯರು ರಾತ್ರಿ ಸಮಯದಲ್ಲಿ ಹೆರಿಗೆ ವಾರ್ಡ್ಗೆ ಹೋಗಲು ಅವಕಾಶ ಇರುವುದಿಲ್ಲ ಎಂದಿದ್ದಾರೆ. ಆದರೆ, ಆರೋಪಿ ವೈದ್ಯರಿಗೆ ನಿಂದಿಸಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಆಸ್ಪತ್ರೆ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.