Connect with us

    BANTWAL

    ಬಂಟ್ವಾಳ – ಪಡಿತರ ಅಕ್ಕಿ ಕಳ್ಳರನ್ನು ಹಿಡಿಯುವಲ್ಲಿ ಜಿಲ್ಲಾಡಳಿತ ಮತ್ತು ಸರಕಾರ ವಿಫಲ

    ಬಂಟ್ವಾಳ ಡಿಸೆಂಬರ್ 09 :ಸರಕಾರದಿಂದ ಬಿ.ಪಿ‌.ಎಲ್ ಕಾರ್ಡ್ ದಾರರಿಗೆ ನೀಡುವ ಕೋಟ್ಯಾಂತರ ರೂ ಮೌಲ್ಯದ ಸಾವಿರಾರು ಕಿಂಟ್ವಾಲ್ ಅಕ್ಕಿಯನ್ನು ತಲಪಾಡಿ ಪೊನ್ನೊಡಿ ರಾಜ್ಯ ಆಹಾರ ನಿಗಮದ ಅಕ್ಕಿ ಶೇಖರಣಾ ಕೇಂದ್ರದಿಂದ ಅಧಿಕಾರಿಗಳು ಕಳವು ಮಾಡಿದ್ದಾರೆ, ಅಕ್ಕಿ ಕಳ್ಳತನದ ಜಾಲವನ್ನು ಬೇಧಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಒತ್ತಾಯ ಮಾಡಿದ್ದಾರೆ.


    ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಳಿಗೆಯಿಂದ 1.32 ಕೋಟಿ ಮೌಲ್ಯದ 3850 ಕಿಂಟ್ವಾಲ್ ಅಕ್ಕಿಯನ್ನು ಗೊಡೌನ್ ನಿಂದ ಕಳವು ಮಾಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅಗಸ್ಟ್ 17 ರಂದು ಗೊಡೌನ್ ನಿಂದ ಅಕ್ಕಿ ಕಳವು ನಡೆದಿರುವ ಬಗ್ಗೆ ಅಧಿಕಾರಿಗಳು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದರು.

    ಶಾಸಕರು ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿ ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಸರಕಾರ ಆಹಾರ ನಿರೀಕ್ಷಕರನ್ನು ಅಮಾನತು ಮಾಡಿ ಕೈ ತೊಳೆದುಕೊಂಡಿದೆ, ಇದು ಸರಿಯಾದ ಕ್ರಮವಲ್ಲ, ಈ ಗೋದಾಮಿನಲ್ಲಿರುವ ಎಲ್ಲಾ ಅಧಿಕಾರಿಗಳನ್ನು ಬಂಧಿಸಿ ಅಕ್ಕಿ ಕಳ್ಳತನದ ಜಾಲವನ್ನು ಬಯಲಿಗೆ ಎಳೆಯಬೇಕು ಎಂದು ಅವರು ಒತ್ತಾಯ ಮಾಡಿದರು.

    ಬಡಸಾಮಾನ್ಯರ ಪಡಿತರ ಅಕ್ಕಿಯನ್ನು ಜನರಿಗೆ ನೀಡದೆ ಕಸಿದು ಕಳ್ಳತನದ ಮೂಲಕ ವ್ಯವಹಾರ ಮಾಡುವ ಗ್ಯಾಂಗ್ ಪತ್ತೆ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಸರಕಾರ ವಿಫಲವಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ಹಿಂದೆ ಗೊಡೌನ್ ನಿಂದ ಎಷ್ಟು ಕಳವಾಗಿದೆ, ಮತ್ತು ಇದೇ ರೀತಿಯಲ್ಲಿ ಇತರ ತಾಲೂಕಿನಲ್ಲಿ ಕೂಡ ಕಳ್ಳತನ ನಡೆದಿರಬಹುದು ಎಂಬ ಸಂಶಯವಿದ್ದು, ಹಾಗಾಗಿ ಸಂಬಂಧಿಸಿದ ಆಹಾರ ಸಚಿವರು ಕೂಡಲೇ ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ ತೆಗೆದು ಕೊಳ್ಳಬೇಕು. ಒಂದು ವೇಳೆ ಜಿಲ್ಲಾಡಳಿತ, ಮತ್ತು ಸರಕಾರ ಕಳ್ಳರ ಜೊತೆ ಸೇರಿಕೊಂಡು ಪ್ರಕರಣವನ್ನು ಮುಚ್ಚಿ ಹಾಕಿದರೆ ತಾಲೂಕು‌ ಕಚೇರಿ ಮುಂಭಾಗದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply