LATEST NEWS
ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ
ಮಂಗಳೂರು ಜನವರಿ 14: ಕರಾವಳಿಯ ದೇವಸ್ಥಾನಗಳಲ್ಲಿ ಧರ್ಮದಂಗಲ್ ಮುಂದುವರೆದಿದ್ದು, ಅನ್ಯಧರ್ಮೀಯರಿಗೆ ದೇವಸ್ಥಾನಗಳ ಜಾತ್ರೋತ್ಸವ ಸಂದರ್ಭದಲ್ಲಿ ವ್ಯಾಪಾರಕ್ಕೆ ನಿಷೇಧ ಮುಂದುವರೆದಿದ್ದು, ಇದೀಗ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಸಂತೆ ವ್ಯಾಪಾರಕ್ಕೆ ಅವಕಾಶ ಎಂದು ವಿಶ್ವ ಹಿಂದೂ ಪರಿಷತ್ ಬ್ಯಾನರ್ ಅಳವಡಿಸಿದೆ. ಇಂದಿನಿಂದ ಕಾವೂರು ಜಾತ್ರೆ ಆರಂಭಗೊಂಡಿದೆ. ಈ ಜಾತ್ರೆಯಲ್ಲಿ ವಿವಿಧ ಮತ ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿಗಳು ಭಾಗವಹಿಸುವುದು, ಸಂತೆ ವ್ಯಾಪಾರ ಮಾಡುತ್ತಿರುವುದು ಹಿಂದಿನಿಂದಲೂ ನಡೆದುಬಂದಿದೆ.
ಆದರೆ ಜನವರಿ 10ರಂದು ‘ಮುಸ್ಲಿಮ್ ಧರ್ಮದವರು ಸಂತೆ ವ್ಯಾಪಾರ ಮಾಡುವುದಕ್ಕೆ ಬಹಿಷ್ಕಾರ ಹಾಕಲಾಗಿದೆ’ ಎಂಬ ಜನಾಂಗೀಯ ನಿಂದನೆಯ ಬ್ಯಾನರ್ ಅಳವಡಿಸಲಾಗಿತ್ತು. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ, ಎಸಿಪಿಯವರ ಗಮನಕ್ಕೆ ತಂದ ಬಳಿಕ ಅದನ್ನು ತೆರವುಗೊಳಿಸಲಾಗಿತ್ತು. ಆದರೆ ನಿನ್ನೆ ಶುಕ್ರವಾರ ಮತ್ತೆ ಇದೇರೀತಿ ‘ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ. ವಿಗ್ರಹಾರಾಧನೆಯನ್ನು ‘ಹರಾಂ’ ಎಂದು ನಂಬಿರುವ ಯಾರಿಗೂ ಅವಕಾಶವಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾವೂರು ಪ್ರಖಂಡ ಹೆಸರಿನಲ್ಲಿ ಬ್ಯಾನರ್ ಅಳವಡಿಸಲಾಗಿದೆ.