KARNATAKA
ಬೆಂಗಳೂರು: ಅತ್ಯಾಚಾರ ಸಂತ್ರಸ್ತೆ ಮೇಲೆ ಕಾನ್‌ಸ್ಟೆಬಲ್ ಅತ್ಯಾಚಾರ!

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಓಯೋ ರೂಮ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಪೊಲೀಸ್ ಕಾನ್‌ಸ್ಟೆಬಲ್ ಸೇರಿ ಇಬ್ಬರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೊಮ್ಮನಹಳ್ಳಿ ಠಾಣೆಯ ಕಾನ್‌ಸ್ಟೆಬಲ್ ಅರುಣ್ ತೋನೆಪ್ ಮತ್ತು ಸಂತ್ರಸ್ತೆಯ ಪ್ರಿಯಕರ ವಿಕ್ಕಿ ಬಂಧಿತರು. ಆರೋಪಿಗಳ ವಿರುದ್ಧ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆ ಹಾಗೂ ಬಿಎನ್‌ಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಏನಿದು ಪ್ರಕರಣ? :ಎದುರು ಮನೆ ನಿವಾಸಿಯು ಈ ಬಾಲಕಿಯನ್ನು ಪರಿಚಯಿಸಿಕೊಂಡು ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಅನಂತರ ಆರೋಪಿಯ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿದೆ. ಹೀಗಾಗಿ ಸಂತ್ರಸ್ತೆ ಮದುವೆಯಾಗುವಂತೆ ಕೇಳಿದ್ದಾಳೆ. ಆಗ ಆರೋಪಿ ಸಾಧ್ಯವಿಲ್ಲ ಎಂದಿದ್ದಲ್ಲದೆ, ಈ ವಿಚಾರವನ್ನು ಯಾರೊಂದಿಗೂ ಹೇಳದಂತೆ ತಾಕೀತು ಮಾಡಿ ಹಲ್ಲೆ ನಡೆಸಿದ್ದ. ಗಾಬರಿಗೊಂಡ ಬಾಲಕಿ ತಾಯಿಗೆ ವಿಚಾರ ತಿಳಿಸಿದ್ದಳು. ತಾಯಿ ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದರು.
ಕಾನ್‌ಸ್ಟೆಬಲ್‌ನಿಂದ ಅತ್ಯಾಚಾರ: ತನ್ನ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ತಿಳಿದುಕೊಂಡ ಕಾನ್‌ಸ್ಟೆಬಲ್ ಅರುಣ್, ಪ್ರಕರಣದಲ್ಲಿ ಸಹಾಯ ಮಾಡುತ್ತೇನೆ ಹಾಗೂ ಕೆಲಸವನ್ನು ಕೊಡಿಸುತ್ತೇನೆ ಎಂದು ಪರಿಚಯಸಿಕೊಂಡಿದ್ದನು. ಬಳಿಕ ಪ್ರತ್ಯೇಕವಾಗಿ ಇರಬೇಕೆಂದು ಸೂಚಿಸಿ 2024ರ ಡಿ. 18ರಂದು ಬಿಟಿಎಂ ಲೇಔಟ್‌ನಲ್ಲಿರುವ ಪಿಜಿಯಲ್ಲಿ ಇರಿಸಿದ್ದ.
ಡಿ. 22 ಮತ್ತು 30ರಂದು ಬಿಟಿಎಂ ಲೇಔಟ್‌ನ ಓಯೋ ರೂಮ್‌ಗೆ ಬಾಲಕಿಯನ್ನು ಕರೆದೊಯ್ದು ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ. ಆ ದೃಶ್ಯಗಳನ್ನು ವೀಡಿಯೋ ಮಾಡಿಕೊಂಡಿದ್ದಾನೆ. ಸಂತ್ರಸ್ತೆ ಎಚ್ಚರಗೊಂಡಾಗ ದೈಹಿಕ ಸಂಪರ್ಕ ಬೆಳೆಸಿದ ವೀಡಿಯೋಗಳು ನನ್ನ ಬಳಿಯಿವೆ ಎಂದು ಬೆದರಿಸಿದ್ದನು. ಈ ವಿಚಾರವನ್ನು ತಾಯಿ ಬಳಿ ಸಂತ್ರಸ್ತೆ ಹೇಳಿಕೊಂಡಿದ್ದಳು. ಹೀಗಾಗಿ ತಾಯಿ ಮೈಕೋ ಲೇಔಟ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು.