Connect with us

LATEST NEWS

ಆಯುರ್ವೇದ ಪಂಚಕರ್ಮ ಚಿಕಿತ್ಸೆ: ಸರಳ ವಿವರಣೆ

ಆಯುರ್ವೇದ ಚಿಕಿತ್ಸೆಯಲ್ಲಿ ಪಂಚಕರ್ಮವು ಬಹಳ ಮುಖ್ಯ ಚಿಕಿತ್ಸಾ ವಿಧಾನವಾಗಿದೆ. ಒಟ್ಟಾರೆಯಾಗಿ ಆಯುರ್ವೇದ ಚಿಕಿತ್ಸೆಯನ್ನು ಮೂರು ಮುಖ್ಯ ವಿಭಾಗಗಳಾಗಿ ವಿಂಗಡಿಸಬಹುದು –

  • ಆಯುರ್ವೇದ ಪಂಚಕರ್ಮ ಚಿಕಿತ್ಸೆಗಳು
  • ಸಹಾಯಕ ಆಯುರ್ವೇದ ಚಿಕಿತ್ಸೆಗಳು. ಉದಾ: ಎಣ್ಣೆ ಮಸಾಜ್, ಹಬೆ ಚಿಕಿತ್ಸೆ ಇತ್ಯಾದಿ
  • ರೋಗಗಳಿಗೆ ಅನುಗುಣವಾಗಿ ಮತ್ತು ಆರೋಗ್ಯವನ್ನು ಉತ್ತಮಗೊಳಿಸುವುದಕ್ಕಾಗಿ ಆಯುರ್ವೇದ ಔಷಧಿಗಳ ಮೂಲಕ ಚಿಕಿತ್ಸೆ

ಪಂಚಕರ್ಮದ ಮೂಲ ತತ್ವ:

ಆಯುರ್ವೇದದ ಪ್ರಕಾರ ವಾತಾವರಣ, ಹವಾಮಾನ, ಅನುಚಿತ ಆಹಾರ ಮತ್ತು ಜೀವನಶೈಲಿ ಅಭ್ಯಾಸಗಳ ಪರಿಣಾಮದಿಂದಾಗಿ ದೇಹದಲ್ಲಿ ವಿಷಾಂಶಗಳು ಸಂಗ್ರಹವಾಗುತ್ತವೆ. ಇದನ್ನು ಆಯುರ್ವೇದದಲ್ಲಿ ‘ಆಮ’ ಎಂದು ಕರೆಯಲಾಗುತ್ತದೆ. ವಿಷಾಂಶಗಳಲ್ಲಿ ಎರಡು ವಿಧಗಳಿರಬಹುದು.

  • ಅನುಚಿತ ಆಹಾರ/ಜೀವನಶೈಲಿಯಿಂದಾಗಿ ದೇಹಕ್ಕೆ ಪ್ರವೇಶಿಸುವ ವಿಷಾಂಶಗಳು – ಆಹಾರ, ಗಾಳಿ ಇತ್ಯಾದಿಗಳ ಮೂಲಕ ಸೂಕ್ಷ್ಮ ಜೀವಿಗಳ ಪ್ರವೇಶ.
  • ಹವಾಮಾನ ವೈಪರೀತ್ಯ ಮತ್ತು ಅನುಚಿತ ಆಹಾರ ಇತ್ಯಾದಿಗಳಿಂದ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ವಿಷಾಂಶಗಳು – ಹೆಚ್ಚಿನ ಕೊಬ್ಬಿನ ಸೇವನೆಯು ಅತಿಯಾದ ಕೊಲೆಷ್ಟ್ರಾಲ್ ಗೆ ಕಾರಣವಾಗುತ್ತದೆ, ವಯಸ್ಕರಲ್ಲಿ ಉಂಟಾಗುವ ಕೀಲುಗಳ ತೊಂದರೆಗಳು ಸಂಧಿವಾತಕ್ಕೆ ಕಾರಣವಾಗುತ್ತದೆ.

ಯಾವುದೇ ರೋಗಗಳ ಉತ್ಪಾದನೆಯನ್ನು ದೇಹದಲ್ಲಿ ವಿಷಾಂಶಗಳ ಸಂಗ್ರಹ, ದೋಷ, ಶರೀರ ಮತ್ತು ಮನಸ್ಸುಗಳ ಮೇಲೆ ಅವುಗಳ ಪ್ರಭಾವ – ಈ ಅಂಶಗಳ ಮೂಲಕ ವಿವರಿಸಬಹುದು.

ಆಯುರ್ವೇದದಲ್ಲಿ, ಈ ವಿಷಾಂಶಗಳ ಸಂಗ್ರಹವನ್ನು ತ್ರಿದೋಷಗಳ ಅಂದರೆ ವಾತ, ಪಿತ್ತ ಮತ್ತು ಕಫ – ಇವುಗಳ ಏರುಪೇರಿನ ಮೂಲಕ ತಿಳಿಯಬಹುದಾಗಿದೆ. ತ್ರಿದೋಷಗಳು ಸಮತೋಲನದಲ್ಲಿರುವಾಗ, ದೇಹವನ್ನು ಸಂರಕ್ಷಿಸುತ್ತವೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಆದರೆ ಯಾವಾಗ ತ್ರಿದೋಷಗಳ ಅಸಮತೋಲನ ಉಂಟಾಗುತ್ತದೆಯೋ, ಅವು ರೋಗಗಳಿಗೆ ಕಾರಣವಾಗುತ್ತವೆ.

  • ತ್ರಿದೋಷ – ಎಲ್ಲಾ ದೋಷಗಳ ಪರಸ್ಪರ ಹೊಂದಾಣಿಕೆಯು ಉತ್ತಮ ಆರೋಗ್ಯವನ್ನು ಸೂಚಿಸುತ್ತದೆ.
  • ತ್ರಿದೋಷಗಳ ಅಸಮತೋಲನ – ಒಂದು, ಎರಡು ಅಥವಾ ಮೂರೂ ದೋಷಗಳು ವೃದ್ಧಿಸಿದಾಗ ರೋಗಗಳಿಗೆ ಕಾರಣವಾಗುತ್ತವೆ.
  • ಈಗ, ನಾವು ಈ ಉಲ್ಬಣಗೊಂಡ ದೋಷಗಳನ್ನು ಮರಳಿ ಸಾಮಾನ್ಯ ಸ್ಥಿತಿಗೆ ತರಬೇಕು ಅಥವಾ ದೇಹದಿಂದ ಹೊರಹಾಕಬೇಕು.
  • ದೋಷಗಳನ್ನು ಸಾಮಾನ್ಯ ಸ್ಥಿತಿಗೆ ತರಲು, ನಾವು ಮಸಾಜ್, ಆಹಾರದಲ್ಲಿನ ಬದಲಾವಣೆಗಳು, ಔಷಧಿಗಳನ್ನು ಬಳಸುತ್ತೇವೆ. ದೋಷಗಳ ಅಸಮತೋಲನವು ಸಣ್ಣ ಪ್ರಮಾಣದಲ್ಲಿದ್ದಾಗ ಮಾತ್ರ ಇದು ಸಹಾಯಕವಾಗುತ್ತದೆ.
  • ಆದರೆ ದೋಷಗಳು ದೊಡ್ಡ ಪ್ರಮಾಣದಲ್ಲಿ ಉಲ್ಬಣಗೊಂಡಿದ್ದರೆ ಪಂಚಕರ್ಮ ಚಿಕಿತ್ಸೆಯ ಮೂಲಕ ದೇಹದಿಂದ ಹೊರ ಹಾಕುವುದು ಉತ್ತಮ.
  • ಆಯುರ್ವೇದ ಚಿಕಿತ್ಸೆಯು ವಿಷಾಂಶಗಳನ್ನು ಪಂಚಕರ್ಮ ಚಿಕಿತ್ಸೆಗಳ ಮೂಲಕ ದೇಹದಿಂದ ನಿವಾರಿಸುವ ಗುರಿಯನ್ನು ಹೊಂದಿದೆ.

ಪಂಚಕರ್ಮ ಎಂದರೇನು?

ಪಂಚಕರ್ಮ ಎಂದರೆ ಆಯುರ್ವೇದದ ಐದು ವಿಶೇಷ ಚಿಕಿತ್ಸಾ ವಿಧಾನಗಳು.

ಆ ಐದು ವಿಧಾನಗಳು –

  1. ವಮನ ಔಷಧಗಳನ್ನು ನೀಡಿ ವಾಂತಿ ಮಾಡಿಸುವ ಮೂಲಕ ದೇಹದಲ್ಲಿರುವ ವಿಷಾಂಶಗಳನ್ನು ಹೊರ ಹಾಕುವ ಪ್ರಕ್ರಿಯೆ. ಪೂರ್ವಸಿದ್ಧತಾ ಕಾರ್ಯವಿಧಾನಗಳ ನಂತರ ವಮನ ಚಿಕಿತ್ಸೆಯನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಕಫ ದೋಷದ ಅಸಮತೋಲನದಿಂದ ಉಂಟಾಗುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ವಮನ ಚಿಕಿತ್ಸೆಯನ್ನು ನೀಡಲಾಗುತ್ತದೆ. ವಮನ ಚಿಕಿತ್ಸೆಯು 3 – 7 ದಿನಗಳವರೆಗೆ ನಡೆಯುತ್ತದೆ.
  2. ವಿರೇಚನ ಔಷಧಗಳನ್ನು ನೀಡಿ ಭೇದಿಯನ್ನುಂಟುಮಾಡಿ, ದೇಹದಲ್ಲಿರುವ ವಿಷಾಂಶಗಳನ್ನು ಹೊರ ಹಾಕುವ ಪ್ರಕ್ರಿಯೆ. ವಿರೇಚನ ಚಿಕಿತ್ಸೆಯನ್ನು ಕೂಡಾ ಪೂರ್ವಸಿದ್ಧತಾ ಕಾರ್ಯವಿಧಾನಗಳ ನಂತರವೇ ನೀಡಲಾಗುತ್ತದೆ. ಸಾಮಾನ್ಯವಾಗಿ ಪಿತ್ತ ದೋಷದ ಅಸಮತೋಲನದಿಂದ ಉಂಟಾಗುವ ಕಾಯಿಲೆಗಳಿಗೆ ವಿರೇಚನ ಚಿಕಿತ್ಸೆಯನ್ನು ನೀಡಲಾಗುತ್ತದೆ. ವಿರೇಚನ ಚಿಕಿತ್ಸೆಯು 3 – 7 ದಿನಗಳ ವರೆಗೆ ನಡೆಯುತ್ತದೆ.

3 & 4. 2 ವಿಧದ ಬಸ್ತಿ ಆಯುರ್ವೇದ ಎನಿಮಾ ಚಿಕಿತ್ಸೆಯು ಮಲಬದ್ಧತೆಯನ್ನು ನಿವಾರಿಸಲು ನೀಡಲಾಗುವ ಸಾಮಾನ್ಯ ಎನಿಮಾಕ್ಕಿಂತ ಸಾಕಷ್ಟು ಭಿನ್ನವಾಗಿದೆ. ಇದರ ಉದ್ದೇಶ ಮಲವಿಸರ್ಜನೆಯನ್ನು ಕ್ರಮಬದ್ಧಗೊಳಿಸುವುದು ಮಾತ್ರವಲ್ಲ ಬದಲಾಗಿ ವಾತ ದೋಷವನ್ನು ಸಮತೋಲನಗೊಳಿಸಿ ಅದರಿಂದ ಉಂಟಾಗುವ ರೋಗಗಳಾದ ಪಕ್ಷವಾತ, ಗೌಟ್, ಸಂಧಿವಾತ, ಇತ್ಯಾದಿ ರೋಗಗಳಿಗೆ ಚಿಕಿತ್ಸೆ ನೀಡುವುದು. ಬಸ್ತಿಯಲ್ಲಿ ಎರಡು ವಿಧಗಳಿವೆ.

ಎಣ್ಣೆಯನ್ನುಪಯೋಗಿಸಿ ನೀಡುವ ಬಸ್ತಿ – ಅನುವಾಸನ ಬಸ್ತಿ

ಗಿಡಮೂಲಿಕೆಗಳ ಕಷಾಯ, ಜೇನುತುಪ್ಪ, ಉಪ್ಪು ಇತ್ಯಾದಿಗಳ ಮಿಶ್ರಣದೊಂದಿಗೆ ನೀಡುವ ಬಸ್ತಿ – ನಿರೂಹ ಬಸ್ತಿ ಅಥವಾ ಕಷಾಯ ಬಸ್ತಿ.

ಬಸ್ತಿ ಚಿಕಿತ್ಸೆಯ ಹಿಂದಿನ ತತ್ವ ಕೆಲವು ಗಿಡಮೂಲಿಕೆಗಳ ಸಕ್ರಿಯ ಘಟಕಗಳು ಬಾಯಿಯ ಮೂಲಕ ಹೊಟ್ಟೆಗೆ ಸೇರಿದಾಗ ಜೀರ್ಣಕ್ರಿಯೆಗೆ ಒಳಗಾಗುವುದಿಲ್ಲ. ಒಂದೋ ಹೊಟ್ಟೆಯಲ್ಲಿನ ಆಮ್ಲದಿಂದಾಗಿ ಅಥವಾ ಯಕೃತ್ತಿನಿಂದ ಈ ಘಟಕಗಳ ಚಯಾಪಚಯ ಕ್ರಿಯೆಯಿಂದಾಗಿ ಈ ಗಿಡಮೂಲಿಕೆಗಳ ಸಕ್ರಿಯ ಘಟಕಗಳು ನಾಶವಾಗುತ್ತವೆ (ಹೆಪಾಟಿಕ್ ಫಸ್ಟ್ ಪಾಸ್ ಎಫೆಕ್ಟ್). ಹೀಗಾಗಿ, ಹಿಂದಿನ ಶತಮಾನಗಳ ಆಯುರ್ವೇದ ತಜ್ಞರು ಔಷಧಗಳನ್ನು ಗುದಮಾರ್ಗದ ಮೂಲಕ ಹೊಟ್ಟೆಯೊಳಕ್ಕೆ ಸೇರಿಸುವುದನ್ನು ಕಂಡುಕೊಂಡರು. ಇದರಿಂದ ಗಿಡಮೂಲಿಕೆಗಳ ಸಕ್ರಿಯ ಘಟಕಗಳು ಕರುಳಿನ ಮೂಲಕ ದೇಹಕ್ಕೆ ಹೀರಿಕೊಳ್ಳುವುದು ಸಾಧ್ಯವಾಯಿತು.

  1. ನಸ್ಯ ಚಿಕಿತ್ಸೆ ಆಯುರ್ವೇದ ಚೂರ್ಣ ಅಥವಾ ಎಣ್ಣೆ, ತುಪ್ಪ, ಗಿಡಮೂಲಿಕೆಗಳ ರಸ ಇತ್ಯಾದಿ ದ್ರವ ಪದಾರ್ಥಗಳನ್ನು ಮೂಗಿನ ಹೊಳ್ಳೆಗಳ ಮೂಲಕ ದೇಹಕ್ಕೆ ಸೇರಿಸುವುದನ್ನು ನಸ್ಯ ಎಂದು ಕರೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಕಿವಿ, ಮೂಗು, ಗಂಟಲಿನ ರೋಗಗಳ ಹಾಗೂ ತಲೆನೋವಿನ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ಯಾವ ಪಂಚಕರ್ಮ ಆಯುರ್ವೇದ ಚಿಕಿತ್ಸೆಯು ನಿಮಗೆ ಸೂಕ್ತವಾಗಿದೆ?

ಪಂಚಕರ್ಮ ಚಿಕಿತ್ಸೆಯು ಐದು ಚಿಕಿತ್ಸಾ ವಿಧಾನಗಳನ್ನು ಒಳಗೊಂಡಿದೆ. ಸಾಧಾರಣವಾಗಿ ನಿಮ್ಮ ಶರೀರದ ಸ್ಥಿತಿಗತಿಗನುಗುಣವಾಗಿ ಅಗತ್ಯವಿರುವ ಪಂಚಕರ್ಮ ಚಿಕಿತ್ಸೆಯನ್ನು ಆಯುರ್ವೇದ ವೈದ್ಯರು ನಿರ್ದೇಶಿಸುತ್ತಾರೆ. ಈ ಕೆಳಗಿನ ಅಂಶಗಳ ಆಧಾರದ ಮೇಲೆ ಚಿಕಿತ್ಸೆಯನ್ನು ಆಯ್ಕೆ ಮಾಡಲಾಗುತ್ತದೆ –

  • ವ್ಯಕ್ತಿಯ ವಯಸ್ಸು ಮತ್ತು ಪ್ರಕೃತಿ
  • ರೋಗಿಯ ಶಕ್ತಿ ಮತ್ತು ದೇಹದ ಪ್ರಕಾರ
  • ರೋಗದ ತೀವ್ರತೆ
  • ರೋಗ ಮತ್ತು ರೋಗಿಯಲ್ಲಿ ದೋಷದ ಪ್ರಾಬಲ್ಯ

ರೋಗಿಗೆ ಯಾವ ಪಂಚಕರ್ಮ ಚಿಕಿತ್ಸೆಯು ಸೂಕ್ತ ಎಂಬುವುದು ವೈದ್ಯರ ಆಯ್ಕೆಗೆ ಬಿಟ್ಟದ್ದು. ನಿರ್ದಿಷ್ಟ ರೋಗಗಳಿಗೆ ನಿರ್ದಿಷ್ಟವಾದ ಪಂಚಕರ್ಮ ಚಿಕಿತ್ಸೆಯನ್ನು ಉಲ್ಲೇಖಿಸಲಾಗಿದ್ದರೂ, ವೈದ್ಯರು ತಮ್ಮದೇ ಆದ ಮಾನದಂಡಗಳಿಂದ ಬದಲಾವಣೆಗಳನ್ನು ಮಾಡಬಹುದು. ಆಯುರ್ವೇದ ಪಠ್ಯಗಳಲ್ಲಿ ಉಲ್ಲೇಖಿಸಲ್ಪಟ್ಟ ಪ್ರಕಾರ ಪಂಚಕರ್ಮ ಚಿಕಿತ್ಸೆಯನ್ನು ಮಾಡಲಾಗುತ್ತದೆ.

ವಮನ ಚಿಕಿತ್ಸೆ: ಉಸಿರಾಟ ಸಂಬಂಧಿ ಕಾಯಿಲೆಗಳು (ಕೆಮ್ಮು, ಶೀತ, ಅಸ್ತಮಾ), ಗೆಡ್ಡೆಗಳು, ಮಧುಮೇಹ, ಅಜೀರ್ಣ, ವಿಷ, ಅತಿಯಾದ ಜೊಲ್ಲು ಸ್ರಾವ, ರುಚಿಹೀನತೆ, ಮನೋರೋಗ, ರಕ್ತಹೀನತೆ, ಬೊಜ್ಜು, ಬಾವು, ಗುಣವಾಗದ ಹಳೆಯ ಗಾಯ ಇತ್ಯಾದಿ ರೋಗಗಳಲ್ಲಿ ವಮನ ಚಿಕಿತ್ಸೆಯು ಸೂಕ್ತವಾಗಿದೆ.

ದುರ್ಬಲ ಶರೀರದವರು, ಗಾಯಗೊಂಡವರು, ಬೊಜ್ಜು ಶರೀರದವರು, ಕೃಶ ಶರೀರದವರು, ಮಕ್ಕಳು, ವಯಸ್ಸಾದವರು, ದಣಿದವರು, ಹಸಿದವರು, ಬಾಯಾರಿದವರು, ಹೃದ್ರೋಗಿಗಳು, ಉಪವಾಸ ಆಚರಿಸುತ್ತಿರುವವರು ವಮನ ಚಿಕಿತ್ಸೆಗೆ ಒಳಗಾಗಬಾರದು.

ವೀರೇಚನ ಚಿಕಿತ್ಸೆ: ಜ್ವರ, ಚರ್ಮದ ಕಾಯಿಲೆ, ಮಧುಮೇಹ, ಮೂಲವ್ಯಾಧಿ, ಫಿಸ್ಟುಲಾ, ಗೆಡ್ಡೆಗಳು, ಹೊಟ್ಟೆಯುಬ್ಬರ, ರಕ್ತಹೀನತೆ, ಚರ್ಮದ ಸೋಂಕುಗಳು, ಅಜೀರ್ಣ, ರುಚಿಹೀನತೆ, ಪಿತ್ತಜನಕಾಂಗದ ಕಾಯಿಲೆಗಳು, ಮನೋರೋಗ, ಬಾವು, ಗುಣವಾಗದ ಹಳೆಯ ಗಾಯ, ಕಣ್ಣು ಮತ್ತು ಮೂಗು ಸಂಬಂಧಿತ ಕಾಯಿಲೆಗಳು ಇತ್ಯಾದಿ ರೋಗಗಳಲ್ಲಿ ವಿರೇಚನ ಚಿಕಿತ್ಸೆಯು ಉಲ್ಲೇಖಿಸಲ್ಪಟ್ಟಿದೆ.

ಎರಡು ರೀತಿಯ ಬಸ್ತಿ:

ವೈದ್ಯರು ವಿವಿಧ ರೀತಿಯ ಬಸ್ತಿ ಮತ್ತು ಔಷಧ ಸಂಯೋಜನೆಗಳನ್ನು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ತಮ್ಮ ಯುಕ್ತಿಗನುಗುಣವಾಗಿ ಬಳಸುತ್ತಾರೆ. ಈ ನಿರ್ಧಾರ ಆಯುರ್ವೇದ ವೈದ್ಯರ ಆಯ್ಕೆಗೆ ಬಿಟ್ಟದ್ದು.

ನಸ್ಯ ಚಿಕಿತ್ಸೆ: ಸಾಮಾನ್ಯವಾಗಿ ಕಿವಿ, ಮೂಗು, ಗಂಟಲು, ಹಲ್ಲುಗಳಿಗೆ ಸಂಬಂಧಿಸಿದ ಕಾಯಿಲೆಗಳಲ್ಲಿ, ಕೂದಲಿನ ಅಕಾಲಿಕ ನರೆ, ಕೂದಲು ಉದುರುವುದು, ತಲೆನೋವು ಇತ್ಯಾದಿ ರೋಗಗಳಲ್ಲಿ ನಸ್ಯ ಚಿಕಿತ್ಸೆಯನ್ನು ನೀಡಲಾಗುತ್ತದೆ. ನಸ್ಯ ಚಿಕಿತ್ಸೆಗೆ ಬಳಸುವ ಎಣ್ಣೆಗಳಲ್ಲಿ ಅಣು ತೈಲ ಬಹಳ ಪ್ರಮುಖವಾದುದು.

ಪ್ರಶ್ನೆಗಳು ಮತ್ತು ಉತ್ತರಗಳು:

ಪಂಚಕರ್ಮ ಚಿಕಿತ್ಸೆ ಎಂದರೇನು?

ಪಂಚಕರ್ಮ ಚಿಕಿತ್ಸೆಯು ಆಯುರ್ವೇದ ಚಿಕಿತ್ಸೆಗಳಲ್ಲಿ ಬಳಸಲ್ಪಡುವ ಐದು ಚಿಕಿತ್ಸಾ ವಿಧಾನಗಳ ಒಂದು ಗುಂಪಾಗಿದೆ. ಅವು ಯಾವುವೆಂದರೆ –

  1. ವಮನ
  2. ವಿರೇಚನ
  3. & 4. ಎರಡು ವಿಧದ ಬಸ್ತಿ (ಎರಡು ರೀತಿಯ ಎನಿಮಾ)
  1. ನಸ್ಯ

ಯಾರೂ ಬೇಕಾದರೂ ಪಂಚಕರ್ಮ ಚಿಕಿತ್ಸೆಗೆ ಒಳಪಡಬಹುದೇ?

ಕೆಲವು ವರ್ಗದ ಜನರನ್ನು ಹೊರತುಪಡಿಸಿ ಅಂದರೆ ತುಂಬಾ ವಯಸ್ಸಾದ ಜನರು, ಮಕ್ಕಳು, ಗರ್ಭಿಣಿಯರನ್ನು ಹೊರತುಪಡಿಸಿ ಯಾರೂ ಕೂಡಾ ಪಂಚಕರ್ಮ ಚಿಕಿತ್ಸೆಗೆ ಒಳಪಡಬಹುದು.

ಯಾವುದೇ ರೋಗಗಳಿಲ್ಲದ ಸಾಮಾನ್ಯ ವ್ಯಕ್ತಿಗೆ ಪಂಚಕರ್ಮ ಚಿಕಿತ್ಸೆ ನೀಡಬಹುದೇ?

ಆರೋಗ್ಯವಂತ ವ್ಯಕ್ತಿಗಳಲ್ಲಿಯೂ ಕೂಡಾ ಆಹಾರದ ಬದಲಾವಣೆಗಳು, ಹವಾಮಾನ ಬದಲಾವಣೆಗಳು, ಇತ್ಯಾದಿಗಳಿಂದ ದೋಷಗಳು ಅಸಮತೋಲನಕ್ಕೆ ಒಳಗಾಗುತ್ತವೆ. ಆದ್ದರಿಂದ, ಆರೋಗ್ಯವಂತ ವ್ಯಕ್ತಿಯು ಸಹ ದೀರ್ಘಕಾಲದವರೆಗೆ ಸರಿಯಾದ ಆರೋಗ್ಯ ನಿರ್ವಹಣೆಗಾಗಿ ಪಂಚಕರ್ಮ ಚಿಕಿತ್ಸೆಗೆ ಒಳಪಡಬಹುದು.

ಸ್ವತಃ ಪಂಚಕರ್ಮ ಚಿಕಿತ್ಸೆಯನ್ನು ಮಾಡಬಹುದೇ?

ಯಾವುದೇ ವೈದ್ಯಕೀಯ ಪದ್ಧತಿಯಲ್ಲಾಗಲಿ ಸ್ವಯಂ ಚಿಕಿತ್ಸೆ ಮಾಡುವುದು ಅಪಾಯಕಾರಿ. ಪಂಚಕರ್ಮ ಚಿಕಿತ್ಸೆಯನ್ನು ತಜ್ಞ ವೈದ್ಯರ ಮಾರ್ಗದರ್ಶನದಲ್ಲೇ ನಡೆಸಬೇಕು.

ಪಂಚಕರ್ಮ ಚಿಕಿತ್ಸೆ ಪಡೆಯುವುದಕ್ಕಾಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುವ ಅಗತ್ಯವಿದೆಯೇ?

ಪಂಚಕರ್ಮ ಚಿಕಿತ್ಸೆ ಪಡೆಯುವುದಕ್ಕಾಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುವುದು ಕಡ್ಡಾಯವಲ್ಲ. ಚಿಕಿತ್ಸೆಗಾಗಿ  ವೈದ್ಯರು ನಿಮ್ಮನ್ನು ಕರೆದಾಗ ಆಸ್ಪತ್ರೆಗೆ ಬಂದು ಚಿಕಿತ್ಸೆ ಮುಗಿಸಿಕೊಂಡು ನಂತರ ಮನೆಗೆ ಹಿಂತಿರುಗಬಹುದು.

ಪಂಚಕರ್ಮ ಚಿಕಿತ್ಸೆಯ ಅವಧಿಯಲ್ಲಿ ಕೆಲಸಕ್ಕೆ ಹಾಜರಾಗಬಹುದೇ?

ನಿಮ್ಮ ಕೆಲಸವು ಹೆಚ್ಚಿನ ದೈಹಿಕ ಚಟುವಟಿಕೆಯನ್ನು ಒಳಗೊಂಡಿರದಿದ್ದರೆ, ಪಂಚಕರ್ಮ ಚಿಕಿತ್ಸೆಯ ಅವಧಿಯಲ್ಲಿ ಕೂಡಾ ನೀವು ಕೆಲಸಕ್ಕೆ ಹೋಗಬಹುದು. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಪಂಚಕರ್ಮ ಚಿಕಿತ್ಸೆಗೆ ಒಳಪಡುತ್ತಿರುವಾಗ ಸ್ವಲ್ಪ ಪ್ರಮಾಣದ ವಿಶ್ರಾಂತಿ ಅಗತ್ಯವಿರುತ್ತದೆ.

ಪಂಚಕರ್ಮಗಳ ಆಯ್ಕೆಯ ಬಗ್ಗೆ ನಾನು ನಿರ್ಧರಿಸಬಹುದೇ?

ಪರಿಣಾಮಕಾರಿ ಪಂಚಕರ್ಮ ಚಿಕಿತ್ಸೆಯನ್ನು ಆರಿಸುವುದು ಆಯುರ್ವೇದ ತಜ್ಞ ವೈದ್ಯರ ಕೆಲಸ. ಆದ್ದರಿಂದ, ನೀವು ಚಿಕಿತ್ಸೆಯ ಆಯ್ಕೆಯ ಬಗ್ಗೆ  ಚಿಂತೆ ಮಾಡುವ ಬದಲು ಚಿಕಿತ್ಸೆಯ ಲಾಭಗಳನ್ನು ಆನಂದಿಸಬಹುದು.

ಪಂಚಕರ್ಮ ಚಿಕಿತ್ಸೆಗೆ ಪೂರ್ವಸಿದ್ಧತಾ ಕ್ರಮಗಳು ಯಾವುವು?

ಪಂಚಕರ್ಮ ಚಿಕಿತ್ಸೆಗೆ ಬಹಳ ಸರಳವಾದ ಪೂರ್ವಸಿದ್ಧತಾ ವಿಧಾನಗಳಿವೆ – ಪಾಚನ ಚಿಕಿತ್ಸೆ – ಜೀರ್ಣಶಕ್ತಿಯನ್ನು ಹೆಚ್ಚಿಸುವುದು

ಸ್ನೇಹನ – ನಿರ್ದಿಷ್ಟ ಪ್ರಮಾಣದ ಔಷಧೀಯ ತುಪ್ಪವನ್ನು 1 ರಿಂದ 7 ದಿನಗಳ ವರೆಗೆ ರೋಗಿಗೆ ನೀಡಲಾಗುತ್ತದೆ. ಇದು ಅಂಗಾಂಶಗಳ ಆಳದಲ್ಲಿರುವ ಜಿಗುಟಾದ ಅಸಮತೋಲಿತ ದೋಷಗಳನ್ನು ಮೃದುಗೊಳಿಸಿ, ದ್ರವೀಕರಿಸಲು ಸಹಾಯ ಮಾಡುತ್ತದೆ.

ಸ್ವೇದನ – ಹಬೆ ಚಿಕಿತ್ಸೆ / ಸ್ಟೀಮ್ ಥೆರಪಿ – ಎಣ್ಣೆ ಮಸಾಜ್ ನ ನಂತರ ವ್ಯಕ್ತಿಯನ್ನು ಕೆಲ ನಿರ್ದಿಷ್ಟ ವಿಧಾನಗಳ ಮೂಲಕ ಬೆವರುವಂತೆ ಮಾಡಲಾಗುತ್ತದೆ. ಇದು ಅಸಮತೋಲಿತ ದೋಷಗಳನ್ನು ರೋಗಸ್ಥಾನದಿಂದ ಜೀರ್ಣಾಂಗ ವ್ಯೂಹಕ್ಕೆ ಒಯ್ಯಲು ಸಹಾಯ ಮಾಡುತ್ತದೆ. ಬಳಿಕ ದೋಷವನ್ನು ವಮನ ಅಥವಾ ವಿರೇಚನ ಚಿಕಿತ್ಸೆಯ ಮೂಲಕ ಹೊರ ಹಾಕಲಾಗುತ್ತದೆ.

ಪಂಚಕರ್ಮ ಚಿಕಿತ್ಸೆಯ ನಂತರದ  ಕ್ರಮಗಳೇನು?

ಪಂಚಕರ್ಮ ಚಿಕಿತ್ಸೆಗೆ ಒಳಪಟ್ಟ ನಂತರ, ಪಂಚಕರ್ಮದ ಗರಿಷ್ಠ ಪ್ರಯೋಜನಗಳನ್ನು ಆನಂದಿಸಲು 3 ರಿಂದ 7 ದಿನಗಳ ಅವಧಿಗೆ ಆಹಾರ ಮತ್ತು ಜೀವನಶೈಲಿಯ ನಿಯಮಗಳನ್ನು ಅನುಸರಿಸಬೇಕಾದುದು ಬಹಳ ಮುಖ್ಯ. ಈ ಕ್ರಮಗಳನ್ನು ಅನುಸರಿಸಲು ತುಂಬಾ ಸುಲಭ. ಇದರ ಮುಖ್ಯ ಉದ್ದೇಶ ಜೀರ್ಣಶಕ್ತಿಯನ್ನು ಮತ್ತು ಮತ್ತು ರೋಗಿಯ ದೈಹಿಕ ಶಕ್ತಿಯನ್ನು  ಪುನಃ ಸ್ಥಾಪಿಸುವುದು.

ಕೇವಲ ಪಂಚಕರ್ಮ ಚಿಕಿತ್ಸೆಯಿಂದ ರೋಗವನ್ನು ಗುಣಪಡಿಸಬಹುದೇ?

ಪಂಚಕರ್ಮ ಚಿಕಿತ್ಸೆಯಿಂದ, ಆಯುರ್ವೇದ ಚಿಕಿತ್ಸೆಯ 50 – 60% ಕ್ಕಿಂತ ಹೆಚ್ಚು ಭಾಗ ಪೂರ್ಣಗೊಳ್ಳುತ್ತದೆ. ಆದರೆ ರೋಗಕ್ಕೆ ಸಂಪೂರ್ಣವಾಗಿ ಚಿಕಿತ್ಸೆ ನೀಡುವುದಕ್ಕಾಗಿ, ನಿರ್ದಿಷ್ಟ ಸಮಯದವರೆಗೆ ಆಯುರ್ವೇದ ಔಷಧಿಗಳ ಸೇವನೆ ಅಗತ್ಯವಿದೆ.

ಒಂದೇ ಬಾರಿಗೆ ಎಲ್ಲಾ ಐದು ವಿಧದ ಪಂಚಕರ್ಮ ಚಿಕಿತ್ಸಗೆ ಒಳಗಾಗಬೇಕೇ?

  • ನೀವು ಯಾವುದಾದರೂ ರೋಗದಿಂದ ಬಳಲುತ್ತಿದ್ದರೆ, ಅದಕ್ಕನುಸಾರವಾಗಿ ನಿಮ್ಮ ವೈದ್ಯರು ಐದು ಪಂಚಕರ್ಮ ಚಿಕಿತ್ಸೆಗಳಲ್ಲಿ ಒಂದು ಅಥವಾ ಎರಡು ಚಿಕಿತ್ಸಾ ವಿಧಾನಗಳನ್ನು ನಿರ್ಧರಿಸುತ್ತಾರೆ. ಎಲ್ಲಾ ಚಿಕಿತ್ಸೆಗಳಿಗೂ ಒಂದೇ ಬಾರಿ ಒಳಗಾಗಬೇಕಾದ ಅಗತ್ಯವಿಲ್ಲ.
  • ನೀವು ಆರೋಗ್ಯವಂತ ವ್ಯಕ್ತಿಯಾಗಿದ್ದರೆ, ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆಯನ್ನು ಪಡೆಯಿರಿ. ಹೆಚ್ಚಿನ ಸಂದರ್ಭಗಳಲ್ಲಿ, ಎಲ್ಲಾ ಐದು ವಿಧಾನಗಳನ್ನು ಮಾಡಬೇಕಾದ ಅಗತ್ಯವಿರುವುದಿಲ್ಲ.
  • ಸಾಮಾನ್ಯವಾಗಿ ಒಂದು ಅಥವಾ ಎರಡು ಪಂಚಕರ್ಮ ಚಿಕಿತ್ಸೆಯನ್ನು ಮಾಡುವಂತೆ ಸಲಹೆ ನೀಡಲಾಗುತ್ತದೆ.

ಪಂಚಕರ್ಮ ಚಿಕಿತ್ಸೆಯ ಒಟ್ಟು ಕಾಲಾವಧಿ ಎಷ್ಟು?

ಪಂಚಕರ್ಮ ಚಿಕಿತ್ಸೆಯ ಅವಧಿಯು ನಿಮ್ಮ ಆರೋಗ್ಯ, ರೋಗದ ಸ್ಥಿತಿ ಮತ್ತು ವೈದ್ಯರ ಸಲಹೆ – ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯ ಅವಧಿಯು  5 – 15 ದಿನಗಳು.

ಆರೋಗ್ಯವಂತ ವ್ಯಕ್ತಿಗಳಲ್ಲಿ ಪಂಚಕರ್ಮ ಚಿಕಿತ್ಸೆಯ ಲಾಭಗಳೇನು?

ಆರೋಗ್ಯವಂತ ವ್ಯಕ್ತಿಗಳಲ್ಲಿ ಪಂಚಕರ್ಮದಿಂದ ಉಂಟಾಗುವ ಪ್ರಯೋಜನಗಳು:

  • ತೂಕ ಕಳೆದುಕೊಳ್ಳುವುದು ಅಥವಾ ತೂಕ ಹೆಚ್ಚಿಸಿಕೊಳ್ಳುವುದು (ವ್ಯಕ್ತಿಯ ಅಗತ್ಯತೆಯನ್ನು ಆಧರಿಸಿ)
  • ಮೊಡವೆ ಅಥವಾ ಇತರ ಚರ್ಮದ ಸೋಂಕುಗಳನ್ನು ತೊಡೆದುಹಾಕುತ್ತದೆ
  • ನೆಗಡಿ, ಜ್ವರ ಮುಂತಾದ ಉಸಿರಾಟ ಸಂಬಂಧಿ ತೊಂದರೆಗಳನ್ನು ತೊಡೆದುಹಾಕುತ್ತದೆ
  • ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ
  • ಶರೀರವನ್ನು ಪುನರುಜ್ಜೀವನಗೊಳಿಸಿ, ಮನಸ್ಸನ್ನು ಶಾಂತವಾಗಿಸುತ್ತದೆ
  • ದೇಹವನ್ನು ಯಾವುದೇ ವಿಷಾಂಶಗಳು ಮತ್ತು ಸ್ವತಂತ್ರ ರಾಡಿಕಲ್ ಇತ್ಯಾದಿಗಳಿಂದ ಮುಕ್ತವಾಗಿಸುತ್ತದೆ
  • ಜ್ಞಾನೇಂದ್ರಿಯಗಳ ಆರೋಗ್ಯವನ್ನು ಸುಧಾರಿಸುತ್ತದೆ
  • ಹಾರ್ಮೋನುಗಳ ಸಮತೋಲನವನ್ನು ಕಾಪಾಡುತ್ತದೆ
  • ಕೂದಲಿನ ಅಕಾಲಿಕ ನರೆ, ಕೂದಲು ಉದುರುವುದು ಮತ್ತು ಇತರ ಸೌಂದರ್ಯ ಸಂಬಂಧಿತ ಸಮಸ್ಯೆಗಳಲ್ಲಿ ಉಪಯುಕ್ತವಾಗಿದ

ಲೇಖಕರು: ಡಾ. ಜನಾರ್ಧನ ವಿ ಹೆಬ್ಬಾರ್

ಆಯುರ್ವೇದ ವೈದ್ಯರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಈಝೀ ಆಯುರ್ವೇದ ಆಸ್ಪತ್ರೆ, ಮಂಗಳೂರು

ಈ ಲೇಖನವನ್ನು ಡಾ. ಜನಾರ್ಧನ ವಿ ಹೆಬ್ಬಾರ್ ಅವರು ಬರೆದ “ಸುಗಮ ಜೀವನಕ್ಕಾಗಿ ಆಯುರ್ವೇದ” ಎಂಬ ಪುಸ್ತಕದಿಂದ ಆರಿಸಲಾಗಿದೆ. ಈ ಪುಸ್ತಕವನ್ನು ಖರೀದಿಸಲು ಈ ಕೆಳಗಿನ QR ಕೋಡ್ ಅನ್ನು ಸ್ಕ್ಯಾನ್ ಮಾಡಿ:

Share Information
Continue Reading
Advertisement
Click to comment

Leave a Reply

Your email address will not be published. Required fields are marked *