FILM
‘ಆದಿ ಪುರುಷ್’ ಸಿನಿಮಾ ಬ್ಯಾನ್ ಮಾಡಿ ಎಂದು ಅಯೋಧ್ಯ ಅರ್ಚಕರಿಂದ ಪ್ರತಿಭಟನೆ

ಅಯೋಧ್ಯ, ಅಕ್ಟೋಬರ್ 07: ಪ್ರಭಾಸ್ ನಟಿಸಿರುವ ‘ಆದಿಪುರುಷ್’ ಸಿನಿಮಾದಲ್ಲಿ ರಾಮಾಯಣಕ್ಕೆ ಅಪಮಾನ ಮಾಡಿದ್ದಾರೆಂದು ಈ ಹಿಂದೆ ಹಿಂದೂ ಪರ ಸಂಘಟನೆಗಳು ಆರೋಪಿಸಿದ್ದವು. ರಾಮಾಯಣದ ಪಾತ್ರಗಳನ್ನು ತಮಗಿಷ್ಟ ಬಂದಂತೆ ಪ್ರೆಸೆಂಟ್ ಮಾಡಿರುವುದಕ್ಕಾಗಿ ಭಾರೀ ಆಕ್ರೋಶ ವ್ಯಕ್ಯವಾಗಿತ್ತು. ಇದೀಗ ಪ್ರತಿಭಟನೆಯ ಅಖಾಡಕ್ಕೆ ಅಯೋಧ್ಯ ಅರ್ಚಕರು ಇಳಿದಿದ್ದು, ಈ ಸಿನಿಮಾವನ್ನು ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಮನಿಗೆ ಅಪಮಾನ ಮಾಡಿದವರ ವಿರುದ್ಧ ಕ್ರಮಕ್ಕೂ ಆಗ್ರಹಿಸಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಟೀಸರ್ ಕೂಡ ಕಳಪೆ ಮಟ್ಟದ್ದಾಗಿದೆ ಎಂದು ಟ್ರೋಲಿಗರು ಸಿನಿಮಾ ಬೆನ್ನು ಬಿದ್ದಿದ್ದು, ಈ ನಡುವೆ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಚಿತ್ರತಂಡಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಆದ ಪ್ರಮಾದಗಳನ್ನು ಪಟ್ಟಿ ಮಾಡಿರುವ ಅವರು, ತಪ್ಪುಗಳನ್ನು ತಿದ್ದಿಕೊಳ್ಳಲು ಸೂಚಿಸಿದ್ದಾರೆ.

ಆದಿಪುರುಷ್ ಸಿನಿಮಾದಲ್ಲಿ ಹಿಂದೂಗಳ ಭಾವನೆ ಧಕ್ಕೆ ಮಾಡಲಾಗಿದೆ ಎಂದು ಗೃಹ ಸಚಿವರು ಆರೋಪಿಸಿದ್ದು, ಈಗಾಗಲೇ ಬಿಡುಗಡೆಗೊಂಡ ಟೀಸರ್ ನಲ್ಲಿ ಹನುಮಂತ ಪಾತ್ರಧಾರಿಗೆ ಲೆದರ್ ಬಟ್ಟೆಗಳನ್ನು ತೊಡಿಸಲಾಗಿದೆ. ಹನುಮನ ಸೈನಕ್ಕೂ ಲೆದರ್ ಬಟ್ಟೆ ಇದೆ. ಹೀಗಾಗಿ ಹನುಮ ದೇವರಿಗೆ ಅಪಮಾನ ಮಾಡಲಾಗಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅದನ್ನು ಸರಿ ಮಾಡದೇ ಇದ್ದರೆ ಪರಿಣಾಮ ಸರಿ ಇರಲ್ಲ ಎಂದು ಚಿತ್ರತಂಡಕ್ಕೆ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಿಶ್ರಾ, ಲೆದರ್ ಬಟ್ಟೆಗಳನ್ನು ಹಾಕಿರುವ ಕುರಿತು ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಪತ್ರ ಬರೆಯುವುದಾಗಿ ತಿಳಿಸಿರುವ ಅವರು, ಒಂದು ವೇಳೆ ಆ ದೃಶ್ಯಗಳನ್ನು ತಗೆದು ಹಾಕದೇ ಇದ್ದರೆ ಕಾನೂನು ಕ್ರಮಕ್ಕೂ ತಾವು ಹಿಂಜರಿಯುವುದಿಲ್ಲ ಎನ್ನುತ್ತಾರೆ. ಇಂತಹ ಅಪಮಾನಗಳನ್ನು ಯಾವತ್ತಿಗೂ ಹಿಂದೂಗಳ ಸಹಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.
ಆದಿ ಪುರುಷ್ ಟೀಸರ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಸ್ವತಃ ಪ್ರಭಾಸ್ ಕೂಡ ಕೋಪ ಮಾಡಿಕೊಂಡಿದ್ದಾರೆ. ಟೀಸರ್ ಬಿಡುಗಡೆ ಸಮಾರಂಭ ಮುಗಿದ ನಂತರ ನಿರ್ದೇಶಕರನ್ನು ತಮ್ಮ ರೂಮ್ ಗೆ ಕರೆದು ಬೈದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಸೈಫ್ ಅಲಿ ಖಾನ್ ಅವರಿಗೆ ರಾವಣನ ಪಾತ್ರ ಕೊಟ್ಟಿದ್ದಕ್ಕೂ ಹಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾವಣನ ರೀತಿಯಲ್ಲಿ ಅವರು ಕಾಣುತ್ತಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.