ಮುಂಬಯಿಯಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಮೇಲೆ ಹಲ್ಲೆ 

ಮುಂಬಯಿ ಎಪ್ರಿಲ್ 23: ರಾಷ್ಟ್ರೀಯ ಖಾಸಗಿ ಸುದ್ದಿವಾಹಿನಿಯ ಸಂಪಾದಕ ಅರ್ನಬ್ ಗೋಸ್ವಾಮಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ತಡರಾತ್ರಿ ನಡೆದಿದೆ. ದಿನದ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಅರ್ನಬ್ ಗೋಸ್ವಾಮಿ ಹಾಗೂ ಅವರ ಪತ್ನಿ ಮೇಲೆ ದಾಳಿ ನಡೆಸಿದ್ದಾರೆ.

ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚೆಯ ಸಂದರ್ಭ ಅನರ್ಬ್ ಗೋಸ್ವಾಮಿ ಪಲ್ಘಾರ್‌ನಲ್ಲಿ ನಡೆದ ಹಿಂದೂ ಸಾಧುಗಳ ಹತ್ಯೆ ಬಗ್ಗೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಮೌನವನ್ನು ಪ್ರಶ್ನಿಸುವ ಬರದಲ್ಲಿ ‘ಕ್ರಿಶ್ಚಿಯನ್‌ ಪಾದ್ರಿಗಳು ಕೊಲ್ಲಲ್ಪಟ್ಟಿದ್ದರೆ ಹೀಗೆ ಸುಮ್ಮನೆ ಇರುತ್ತಿದ್ದಿರಾ?’ ಎಂದು ಪ್ರಶ್ನಿಸಿದ್ದರು. ಅಲ್ಲದೆ ಸೋನಿಯಾಗಾಂಧಿಯವರ ಮೂಲ ಹೆಸರನ್ನು ಈ ಸಂದರ್ಭದಲ್ಲಿ ಬಳಸಿ ವಾಗ್ದಾಳಿ ನಡೆಸಿದ್ದರು. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು, ಕಾಂಗ್ರೇಸ್ ನ ಘಟಾನುಘಟಿ ನಾಯಕರು ಅರ್ನಬ್ ಗೋಸ್ವಾಮಿ ಹೇಳಿಕೆಯನ್ನು ಖಂಡಿಸಿದ್ದರು.

ಈ ನಡುವೆ ನಿನ್ನೆ ರಾತ್ರಿ 10 ಗಂಟೆಯ ಸುದ್ದಿ ವಾಹಿನಿಯ ಚರ್ಚೆ ಮುಗಿಸಿ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಅರ್ನಬ್ ಗೋಸ್ವಾಮಿ ಮತ್ತು ಆತನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಇಬ್ಬರು ಪಾರಾಗಿದ್ದಾರೆ.

ಈ ದಾಳಿಗೆ ನೇರ ಹೊಣೆ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಎಂದು ಅರ್ನಬ್‌ ಗೋಸ್ವಾಮಿ ವಿಡಿಯೋ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ‘ಈ ರಾಷ್ಟ್ರದ ಅತಿದೊಡ್ಡ ಹೇಡಿ’ ಎಂದು ಜರೆದಿರುವ ಗೋಸ್ವಾಮಿ, ತನ್ನ ಮತ್ತು ಪತ್ನಿಯ ಮೇಲಿನ ದಾಳಿಗೆ ಸೋನಿಯಾ ಗಾಂಧಿಯೇ ನೇರ ಕಾರಣ. ತನಗೇನಾದರು ಸಂಭವಿಸಿದರೆ ಅದಕ್ಕೂ ಸೋನಿಯಾ ಗಾಂಧಿ ಅವರೇ ಕಾರಣ ಎಂದು ಆರೋಪಿಸಿ ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

ಪತ್ರಕರ್ತರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಮುಂಬಯಿನ ಎನ್‌ಎಂ ಜೋಶಿ ಮಾರ್ಗ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಹಲ್ಲೆ ನಡೆಸಿದವರು ಕಾಂಗ್ರೆಸ್‌ ಕಾರ್ಯಕರ್ತರು ಎನ್ನಲಾಗಿದೆ.