KARNATAKA
ಅಂಕೋಲಾ : ATMನಿಂದ ಹಣ ತೆಗೆದು ಕೊಡಲು ಸಹಾಯ ಮಾಡುವಂತೆ ನಟಿಸಿ ವಂಚನೆ, ಆರೋಪಿ ಮಲ್ಲೇಶಪ್ಪ ಬಂಧನ
ಅಂಕೋಲಾ : ಎಟಿಎಂನಿಂದ ಹಣ ತೆಗೆದು ಕೊಡಲು ಸಹಾಯ ಮಾಡುವಂತೆ ನಟಿಸಿ, ಅಬಲ, ವೃದ್ದರಿಂದ ಹಣ ದೋಚುತ್ತಿದ್ದಆರೋಪಿಯನ್ನು ಉತ್ತರ ಕನ್ನಡದ ಅಂಕೋಲಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾದೇನಹಳ್ಳಿ ಬೂಕಾಪಟ್ಟಣ ಗ್ರಾಮದ ಅರುಣಕುಮಾರ್ ಮಲ್ಲೇಶಪ್ಪ ಬಂಧಿತ ಆರೋಪಿಯಾಗಿದ್ದಾನೆ. ಆತನಿಂದ 25 ಸಾವಿರ ರೂ. ನಗದು, ಮೊಬೈಲ್, ಎಟಿಎಂ ಕಾರ್ಡ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ಟೋಬರ್ 22 ರಂದು ಸಕಲಬೇಣದ ಸುರೇಖಾ ಸುಧೀರ ನಾಯ್ಕ ಎಂಬ ಮಹಿಳೆ ಅಂಕೋಲಾದ ಎಸ್‌ಬಿಐ ಎಟಿಎಂನಲ್ಲಿ ಹಣ ತೆಗೆಯುವಾಗ ಆಕೆಗೆ ಸಹಾಯ ಮಾಡುವ ನೆಪದಲ್ಲಿ ಒಳಬಂದ ಅರುಣಕುಮಾರ್, ಸುರೇಖಾ ಅವರ ಬಳಿ ಇದ್ದಂಥದ್ದೇ ಬೇರೆ ಎಟಿಎಂ ಕಾರ್ಡ್ ಆಕೆಗೆ ನೀಡಿ, ಆಕೆಯ ಎಟಿಎಂ ಪಿನ್ ನ್ನು ಮೋಸದಿಂದ ಗುರುತಿಸಿಕೊಂಡಿದ್ದ. ನಂತರ ಕುಮಟಾಕ್ಕೆ ಹೋಗಿ ಎಟಿಎಂ ಕಾರ್ಡ್ ಬಳಸಿ 40 ಸಾವಿರ ರೂ.ಗಳನ್ನು ಆಕೆಯ ಬ್ಯಾಂಕ್ ಖಾತೆಯಿಂದ ತೆಗೆದು ಪರಾರಿಯಾಗಿದ್ದ.
ನ.9 ರಂದು ತೆಂಕನಾಡಿನ ಚಾಲಕ ಉಮೇಶ ವಾಸು ಗೌಡ ಅವರಿಗೂ ಇದೇ ರೀತಿ ಈತ ವಂಚಿಸಿದ್ದ ಅವರ ಬ್ಯಾಂಕ್ ಖಾತೆಯಿಂದ 37 ಸಾವಿರ ರೂ.ಗಳನ್ನು ಎಗರಿಸಿದ್ದ ಬಗ್ಗೆ ಅಂಕೋಲಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎರಡೂ ಪ್ರಕರಣಗಳ ಬೆನ್ನು ಹತ್ತಿದ ಅಂಕೋಲಾ ಇನ್ಸ್ಪೆಕ್ಟರ್ ಚಂದ್ರಶೇಖರ ಮಠಪತಿ, ಪಿಎಸ್‌ಐಗಳಾದ ಜಯಶ್ರೀ ಪ್ರಭಾಕರ, ಉದ್ದಪ್ಪ ಧರೆಪ್ಪನವರ್, ಸಿಎಚ್‌ಸಿ ಮಾದೇವ ಸಿದ್ದಿ, ಸಿಬ್ಬಂದಿ ಅಂಬರೀಶಷ ನಾಯ್ಕ, ಆಸೀಫ್, ಮನೋಜ ಡಿ., ಶ್ರೀಕಾಂತ ಕಟಬರ, ರಯೀಸ ಭಗವಾನ್, ಉದಯ ಗುನಗಾ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.