LATEST NEWS
ಚೆಕ್‍ಬೌನ್ಸ್ ಪ್ರಕರಣ – ಆರೆಸ್ಟ್ ವಾರೆಂಟ್ ಗೆ ಹೆದರಿ ಕೊಣಾಜೆ ಗ್ರಾಮಪಂಚಾಯತ್ ಅಧ್ಯಕ್ಷೆ ನಾಪತ್ತೆ…!!

ಉಳ್ಳಾಲ: ಸಾಲಕ್ಕೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಜಾರಿಯಾದ ಹಿನ್ನಲೆ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ತಲೆಮರೆಸಿಕೊಂಡಿರುವ ಘಟನೆ ನಡೆದಿದ್ದು. ಅಧ್ಯಕ್ಷೆ ಬಂಧನಕ್ಕೆ ಕೊಣಾಜೆ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕೊಣಾಜೆ ಗ್ರಾಮಪಂಚಾಯತ್ ನ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷೆ ಚಂಚಲಾಕ್ಷಿ ತಲೆಮರೆಸಿಕೊಂಡಿರುವ ಆರೋಪಿ. ಇವರು ಮಮತಾ ಶೈನಿ ಡಿಸೋಜ ಎಂಬವರಿಗೆ ರೂಪಾಯಿ 3 ಲಕ್ಷ ಹಣವನ್ನು ಪಡೆದಿದ್ದು, ಅದಕ್ಕೆ ಪ್ರತಿಯಾಗಿ ಚೆಕ್ ನೀಡಿದ್ದು, ನಂತರ ಹಣ ನೀಡದೆ ಸತಾಯಿಸಿದ ಹಿನ್ನಲೆ ಪೊಲೀಸ್ ಠಾಣೆಯಲ್ಲಿ ಚೆಕ್ ಬೌನ್ಸ್ ಕೇಸು ದಾಖಲಾಗಿತ್ತು. ಆ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಇದೀಗ ನ್ಯಾಯಾಲಯ ಗ್ರಾಮಪಂಚಾಯತ್ ಅಧ್ಯಕ್ಷೆ ಚಂಚಲಾಕ್ಷಿ ವಿರುದ್ದ ಬಂಧನದ ಆದೇಶ ಹೊರಡಿಸಿದೆ.

ಈ ನಡುವೆ ನ್ಯಾಯಲಯದ ಅರೆಸ್ಟ್ ವಾರೆಂಟ್ ಹಿಡಿದುಕೊಂಡು ಹೊರಟ ಪೊಲೀಸರಿಗೆ ಅಧ್ಯಕ್ಷೆ ಕೈಗೆ ಸಿಗಲಿಲ್ಲ. ಈ ಹಿನ್ನಲೆ ಮಮತಾ ಶೈನಿ ಡಿಸೋಜ ಅವರು ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ದೂರು ನೀಡಿದ್ದರು. ಇದೀಗ ಕೊಣಾಜೆ ಪೊಲೀಸರ ಜೊತೆಗೆ ಶೈನಿಯವರು ಆಕೆಯ ಮನೆಗೆ, ಪಂಚಾಯಿತಿಗೆ ತೆರಳಿದ್ದರೂ ಆಕೆ ಪತ್ತೆಯಾಗಲಿಲ್ಲ. ಮನೆಗೆ ಬೀಗ ಹಾಕಲಾಗಿತ್ತು, ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಹೇಳಲಾಗಿದೆ.ಸದ್ಯ ಕೊಣಾಜೆ ಠಾಣಾ ಪೊಲೀಸರು ಆರೋಪಿ ಬಂಧನಕ್ಕಾಗಿ ಶೋಧ ನಡೆಸಿದ್ದಾರೆ.
ಆರೋಪಿತೆ ಚಂಚಲಾಕ್ಷಿ ಕೊಣಾಜೆ ಗ್ರಾಮದ ಪ್ರಥಮ ಪ್ರಜೆಯಾಗಿದ್ದು, ಆದರೆ ಇದೀಗ ಅಪರಾಧ ಪ್ರಕರಣದಲ್ಲಿ ಒಳಪಟ್ಟಿರುವುದರಿಂದ ಕೂಡಲೇ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿಗರು ಒತ್ತಾಯಿಸಿದ್ದಾರೆ.