LATEST NEWS
ಅರಾಟೆ ಸೇತುವೆ ದುರಸ್ಥಿ ಕಾಮಗಾರಿ – ಬೈಕ್ ಸ್ಕೀಡ್ ಆಗಿ ಬಿದ್ದು ಯಕ್ಷಗಾನ ಕಲಾವಿದ ಬಲಿ

ಕುಂದಾಪುರ ಎಪ್ರಿಲ್ 06: ಅರಾಟೆ ಸೇತುವೆ ದುರಸ್ಥಿ ಕಾಮಗಾರಿಗೆ ಹಾಕಲಾಗಿದ್ದ ಮಣ್ಣಿನ ರಾಶಿಗೆ ಬೈಕ್ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಬೈಕ್ ನಲ್ಲಿದ್ದ ಯಕ್ಷಗಾನ ಕಲಾವಿದರೊಬ್ಬರು ಸಾವನಪ್ಪಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಮೃತರನ್ನು ಹಟಿಯಂಗಡಿ ಮೇಳದ ಪ್ರಧಾನ ಮದ್ದಳೆಗಾರ ನಾರಾಯಣ ಪೂಜಾರಿ (40 ) ಎಂದು ಗುರುತಿಸಲಾಗಿದೆ. ಶಿರೂರಿನ ತೂದಳ್ಳಿಯಲ್ಲಿ ನಡೆಯಬೇಕಿದ್ದ ಹಟ್ಟಿಯಂಗಡಿ ಮೇಳದ ಆಟ ಮಳೆ ಬಂದ ಕಾರಣದಿಂದ ಅನಿವಾರ್ಯವಾಗಿ ರದ್ದಾಗಿತ್ತು. ಆ ಕಾರಣದಿಂದ ಮೇಳದ ಪ್ರಧಾನ ಮದ್ದಳೆಗಾರ ನಾರಾಯಣ ಪೂಜಾರಿ ಅವರು ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದರು.

ಈ ಸಂದರ್ಭ ಅರಾಟೆ ಸೇತುವೆ ಬಳಿ ದುರಸ್ತಿಗಾಗಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದು ಗೊಂದಲಕ್ಕೆ ಒಳಗಾದ ನಾರಾಯಣ ಪೂಜಾರಿ ಅವರು ದ್ವಿಮುಖ ಸಂಚಾರ ರಸ್ತೆಯಲ್ಲಿ ಬರುತ್ತಿದ್ದಾಗ ಅಡ್ಡ ಹಾಕಿದ ಮಣ್ಣಿನ ರಾಶಿಗೆ ಗುದ್ದಿ ಬೈಕ್ ನಿಯಂತ್ರಣ ಕಳೆದುಕೊಂಡು ಬಿದ್ದು ಮೃತಪಟ್ಟಿದ್ದಾರೆ. ಈ ಸೇತುವೆ ಬಳಿ ನಡೆದ 4 ನೇ ಬಲಿ ಇದು. ಕುಂದಾಪುರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.