LATEST NEWS
ಕರಾವಳಿಯಲ್ಲಿ ಎಂಆರ್‌ಪಿಎಲ್ ನಿಂದ ಮತ್ತೊಂದು ಭೋಪಾಲ್ ದುರಂತದ ಆತಂಕ

ಕರಾವಳಿಯಲ್ಲಿ ಎಂಆರ್‌ಪಿಎಲ್ ನಿಂದ ಮತ್ತೊಂದು ಭೋಪಾಲ್ ದುರಂತದ ಆತಂಕ
ಮಂಗಳೂರು, ನವೆಂಬರ್ 22 : ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಎಂಆರ್ ಪಿ ಎಲ್ ಕಚ್ಚಾ ತೈಲ ಸಂಸ್ಕರಣ ಘಟಕ ಎಸಗುವ ಅನಾಹುತಕ್ಕೆ ಎಣೆಯಿಲ್ಲ.
ಎಂ ಆರ್ ಪಿಎಲ್ ನ ಮೂರನೇ ವಿಸ್ತರಣಾ ಘಟಕದಿಂದ ಪೆಟ್ ಕೋಕ್ ಹಾರುಬೂದಿ ಮತ್ತೆ ಜೋಕಟ್ಟೆ ಪ್ರದೇಶದ ಮೇಲೆ ಸುರಿಯ ತೊಡಗಿದೆ.

ಈ ಬಾರಿ ಜೋಕಟ್ಟೆಯನ್ನು ದಾಟಿಹೋಗಿದ್ದು ಪಕ್ಕದ ಕಾನ, ಕುಳಾಯಿ, ಕೋಡಿಕೆರೆ ಭಾಗಗಲಳ್ಲಿ ತನ್ನ ಕರಾಳ ಛಾಯೆಯನ್ನು ತೋರಿಸಿದೆ.
ಈ ವಿಶಕಾರಿ ಹಾರುಬೂದಿಯಿಂದ ಈ ಭಾಗದ ಜನದ ಬದುಕು ದುಸ್ತರವಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಘಟಕದ ವಿಷಕಾರಿ ಮಾಲಿನ್ಯದ ವಿರುದ್ದ ಜೋಕಟ್ಟೆ, ತೋಕೂರು, ಕಳವಾರು ಭಾಗದ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದ್ದರು.
ಸತತ ಎರಡು ವರ್ಷ ನಡೆದ ರಾಜಿ ರಹಿತ ಸಂಘರ್ಷದಿಂದ ರಾಜ್ಯ ಸರಕಾರ ಎಚ್ಚೆತ್ತು ಪರಿಹಾರ ಸೂತ್ರವನ್ನು ಮುಂದಿಟ್ಟಿತ್ತು.
ಆರು ಅಂಶಗಳ ಪರಿಹಾರ ಕ್ರಮಗಳನ್ನು ಸರಕಾರಿ ಆದೇಶವಾಗಿ ಘೋಷಿಸಿತ್ತು ಕೂಡ .
ಕನಿಷ್ಟ ಐನೂರು ಕೋಟಿ ವೆಚ್ಚದ ಈ ಪರಿಹಾರ ಕ್ರಮಗಳನ್ನು ವರ್ಷದ ಒಳಗಡೆ ಪೂರ್ಣಗೊಳಿಸುವಂತೆ ಆದೇಶದಲ್ಲಿ ಎಂ ಆರ್ ಪಿ ಎಲ್ ಗೆ ಸೂಚಿಸಿತ್ತು.
ಆದರೆ, ಆದರೆ ಸ್ಥಳೀಯ ಹೋರಾಟಗಾರರು ಹೇಳುವಂತೆ ಎಂ ಆರ್ ಪಿ ಎಲ್ ತನ್ನ ಮಾತು ಉಳಿಸದೆ ತನ್ನ ನಿರ್ಲಕ್ಷ್ಯವನ್ನು ಮುಂದುವರೆಸಿದೆ.
ಅದರ ಪರಿಣಾಮ ಈಗ ಮತ್ತೆ ಕೋಕ್ ಹಾರು ಬೂದಿ, ಸಲ್ಫರ್ ಬೂದಿ ಸುತ್ತಲ ಗ್ರಾಮದ ಜನರ ಅನ್ನದ ತಟ್ಟೆ, ಕುಡಿಯುವ ನೀರಿನ ಮೂಲ ಸೇರತೊಡಗಿದೆ. ಮನೆಯ ಮೇಲೆ ಸುರಿಯತೊಡಗಿದೆ. ಇಷ್ಟೆಲ್ಲ ಅನಾಹುತ ಉಂಟುಮಾಡುತ್ತಿರುವ ನಡುವೆಯೇ ಎಂ ಆರ್ ಪಿ ಎಲ್ l ಮತ್ತೆ ವಿಸ್ತರಣೆಗೊಳ್ಳುತ್ತಿದೆ.
ವಿಸ್ತರಣೆಗೆ ಸಾವಿರ ಎಕರೆ ಕೃಷಿ ಭೂಮಿಯನ್ನು ರೈತರಿಂದ ಬಲವಂತವಾಗಿ ಕಿತ್ತು ನೀಡಲಾಗುತ್ತಿದೆ.
ಇದಕ್ಕೆ ಅಂಕುಶ ಹಾಕದಿದ್ದರೆ ಮಂಗಳೂರಿನ ಜನತೆ ಎಂ ಆರ್ ಪಿ ಎಲ್ ನ ವಿಷ ವರ್ತುಲದಲ್ಲಿ ಆನೇಕ ಭಯಾನಕ ರೋಗಗಳಿಗೆ ತುತ್ತಾಗಿ ಮಂಗಳೂರು ಮತ್ತೊಂದು ಭೋಪಾಲ್ ಆಗುವ ಆತಂಕ ಖಂಡಿತಾ ದೂರ ಇಲ್ಲ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.