LATEST NEWS
ಕರಾವಳಿಯತ್ತ ಬರುತ್ತಿದ್ದೆ ಮತ್ತೊಂದು ಚಂಡಮಾರುತ ‘ ಮಹಾ ‘
ಕರಾವಳಿಯತ್ತ ಬರುತ್ತಿದೆ ಮತ್ತೊಂದು ಚಂಡಮಾರುತ ‘ ಮಹಾ ‘
ಮಂಗಳೂರು ಅಕ್ಟೋಬರ್ 30: ಕ್ಯಾರ್ ಚಂಡಮಾರುತಕ್ಕೆ ನಲುಗಿದ್ದ ಕರಾವಳಿ ಜಿಲ್ಲೆಗಳು ಈಗ ಮತ್ತೊಂದು ಚಂಡಮಾರುತಕ್ಕೆ ಸಿದ್ದವಾಗಬೇಕಿದೆ. ಕ್ಯಾರ್ ಚಂಡಮಾರುತ ಈಗಾಗಲೇ ಕರಾವಳಿಯಲ್ಲಿ ಸಾಕಷ್ಟು ಹಾನಿ ಮಾಡಿದ್ದು, ಈಗ ಮತ್ತೊಂದು ಚಂಡಮಾರುತ “ಮಹಾ” ಯಾವ ರೀತಿ ಅಪ್ಪಳಿಸಲಿದೆ ಎನ್ನುವುದು ಕಾದು ನೋಡಬೇಕಿದೆ.
ಕ್ಯಾರ್ ಚಂಡ ಮಾರುತದಿಂದಾಗಿ ಮಳೆಯಲ್ಲೇ ದಿಪಾವಳಿ ಆಚರಿಸಿದ್ದ ಕರಾವಳಿ ಜನತೆಗೆ ಕಳೆದೆರಡು ದಿನಗಳಿಂದ ಗಾಳಿ ಮಳೆ ಅಬ್ಬರ ಕಡಿಮೆಯಾಗಿ ಬಿಸಿಲು ನೋಡಿದ್ದರು. ಆದರೆ ಈ ಕರಾವಳಿಯ ಮಳೆ ಇನ್ನೂ ಮುಗಿದಿಲ್ಲ…, ಈಗ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಸೈಕ್ಲೋನ್ ಈ ಬಾರಿ ಮತ್ತೆ ಮಳೆ ತರಿಸಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಸ್ತುತ ಕನ್ಯಾಕುಮಾರಿಯ ಕೇಪ್ ಕೊಮೊರಿನ್ ಪ್ರದೇಶದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದೆ. ಆರಂಭಿಕ ಹಂತದಲ್ಲಿ ಉತ್ತರ-ವಾಯವ್ಯದತ್ತ ಮುನ್ನಡೆದು, ಒಂದೆರಡು ದಿನಗಳಲ್ಲಿ ಆಗ್ನೇಯ ಅರಬ್ಬಿ ಸಮುದ್ರ ಪ್ರವೇಶಿಸಿ ಲಕ್ಷದ್ವೀಪ ಬಳಿ ವಾಯುಭಾರ ಕುಸಿತವಾಗಿ ಪರಿವರ್ತನೆಗೊಳ್ಳಲಿದೆ. ಸಮುದ್ರದ ಮೇಲ್ಮೈ ಉಷ್ಣಾಂಶ 29-30 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು, ಮುಂದಕ್ಕೆ ಪರಿಸ್ಥಿತಿಗಳು ಪೂರಕವಾಗಿ ತೀವ್ರತೆ ಹೆಚ್ಚಾಗಿ ಚಂಡಮಾರುತವಾಗಿ ಬದಲಾಗಲಿದೆ ಎನ್ನುತ್ತಾರೆ ಭಾರತೀಯ ಹವಾಮಾನ ಇಲಾಖೆ ತಜ್ಞರು. ‘ಮಹಾ’ ಎಂದು ಹೆಸರಿಡಲಾಗಿರುವ ಈ ಚಂಡಮಾರುತ ಕೆಲವೇ ದಿನಗಳಲ್ಲಿ ಮಳೆಯೊಂದಿಗೆ ಮತ್ತೆ ಅಬ್ಬರಿಸುವ ಎಲ್ಲ ಸಾಧ್ಯತೆಗಳಿವೆ.
ಮತ್ತೆ ಚಂಡಮಾರುತ ಸಾಧ್ಯತೆ ಇರುವುದರಿಂದ ಭಾರಿ ಮಳೆಯಾಗಲಿದ್ದು, ಕಡಲು ಪ್ರಕ್ಷುಬ್ಧಗೊಳ್ಳಲಿದೆ. ಸಮುದ್ರದಿಂದ ತೀರಕ್ಕೆ ಭಾರಿ ಅಲೆಗಳು ಅಪ್ಪಳಿಸುವುದರ ಜತೆಗೆ ಬಲವಾದ ಗಾಳಿಯೂ ಬೀಸಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ತಿಳಿಸಿದೆ.
ಚಂಡಮಾರುತವಾಗಿ ಬದಲಾಗುವ ಮೊದಲು ಮುಂದಿನ ಕೆಲವೇ ದಿನಗಳಲ್ಲಿ ತಮಿಳುನಾಡು, ಕೇರಳ, ಲಕ್ಷದ್ವೀಪದ ಕೆಲವು ಭಾಗಗಳು, ಕರ್ನಾಟಕದ ಕೆಲವು ಭಾಗಗಳಲ್ಲಿ ಭಾರಿ ಗಾಳಿ ಸಹಿತ ಅಬ್ಬರದ ಮಳೆಯಾಗುವ ಸಾಧ್ಯತೆಗಳಿವೆ. ಸಮುದ್ರದ ಅಲೆಗಳು 15 ಅಡಿಯಷ್ಟು ಎತ್ತರ ಇರಬಹುದು ಎಂದು ಹೇಳಿದೆ.