KARNATAKA
ಚಿಕ್ಕಮಗಳೂರಿನಲ್ಲಿ ಇನ್ನೂ ತಣ್ಣಗಾಗದ ಸಿಟಿ ರವಿ ಬೆಂಬಲಿಗರ ಆಕ್ರೋಶ,’ಮೌನಿಯನ್ನು ಅಭ್ಯರ್ಥಿ ಮಾಡಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಸೈಲೆಂಟ್ ಮಾಡಿಬಿಟ್ಟರು’..!
“ನಮ್ಮವರಿಗೆ ಎಂಪಿ ಕೋಟಾ ಬೇಕು ಅಂದಿದ್ದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ‘ಕೋಟ’ ಕೊಟ್ಟುಬಿಟ್ರಾಂತ”, “ಎಲ್ಲಿದೆ ಸಿದ್ಧಾಂತ? ಮೌನಿಯನ್ನು ಅಭ್ಯರ್ಥಿ ಮಾಡಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಸೈಲೆಂಟ್ ಮಾಡಿಬಿಟ್ಟರು”, “ಅಣ್ಣ ಇಲ್ಲಾ ಅಂದರೆ ಎಲ್ಲಾ ಪ್ರೋಗ್ರಾಂ ಕ್ಯಾನ್ಸಲ್ ಆಗುತ್ತದೆ. ರವಿಯ ತಾಕತ್ತು ಜಗತ್ತಿಗೆ ಗೊತ್ತು” ಎಂಬಿತ್ಯಾದಿ ಪೋಸ್ಟ್ಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಚಿಕ್ಕಮಗಳೂರು : ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಜೆಪಿ ಹೈಕಮಾಂಡ್ ಬಿಡುಗಡೆ ಮಾಡಿದೆ. ಅದರಲ್ಲಿ ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ್ ಪೂಜಾರಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಈ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಮತ್ತು ಸಿಟಿ ರವಿ ಮಧ್ಯೆ ಭಾರೀ ಪೈಪೋಟಿ, ಬಹಿರಂಗ ಕದನ ನಡೆಯಿತಾದರೂ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಆದಾಯೆಂಬಂತೆ ಹೈಕಮಾಂಡ್ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಟಿಕೆಟ್ ಘೋಷಿಸಿತು. ಇದು ಸಿಟಿ ರವಿ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಹೇಳಿಕೆಗಳನ್ನು ನೀಡುವ ನಾಯಕರಿಗೆ ಬಿಜೆಪಿಯಲ್ಲಿ ಟಿಕೆಟ್ ಮಿಸ್ ಆಗುತ್ತಿದೆ ಎಂಬುದು ಕಾರ್ಯಕರ್ತರ, ಮುಖಂಡರ ಆರೋಪವಾಗಿದೆ. ಇದೇ ಆರೋಪವನ್ನು ಸಿಟಿ ರವಿ ಅವರ ಬೆಂಬಲಿಗರೂ ಮಾಡಿದ್ದಾರೆ.
ಟಿಕೆಟ್ ಘೋಷಣೆಗೂ ಮುನ್ನ, ಕೇಂದ್ರ ಸಚಿವೆಯೂ ಆಗಿರುವ ಚಿಕ್ಕಮಳೂರು-ಉಡುಪಿ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಸಿಟಿ ರವಿ ಬೆಂಬಲಿಗರು ಸಿಡಿದೆದ್ದಿದ್ದರು. ಈ ಬಾರಿ ಶೋಭಾಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದರು. ಟ್ರೋಲ್ಗಳನ್ನು ಕೂಡ ಮಾಡಿದ್ದರು. ಗೋ ಬ್ಯಾಕ್ ಅಭಿಯಾನವನ್ನೂ ನಡೆಸಿದ್ದರು. ಇದೀಗ ಸಿಟಿ ರವಿ ಅವರಿಗೆ ಟಿಕೆಟ್ ಮಿಸ್ ಆದ ಬೆನ್ನಲ್ಲೇ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಾಟ್ಸ್ಆ್ಯಪ್, ಸಾಮಾಜಿಕ ಜಾಲದಲ್ಲಿ ಸಿಟಿ ರವಿ ಪರ ಅಭಿಯಾನ ನಡೆಸುತ್ತಿರುವ ಅಭಿಮಾನಿಗಳು, ಮೌನಿ ಕೋಟಗೆ ಟಿಕೆಟ್ ಕೊಟ್ಟು ಕಾರ್ಯಕರ್ತರನ್ನು ಸೈಲೆಂಟ್ ಮಾಡಿದರು. ಎಲ್ಲಿದೆ ನ್ಯಾಯ?ನಿಷ್ಠಾವಂತ ಕಾರ್ಯಕರ್ತರ ಕಗ್ಗೊಲೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮಯ್ಯಗೆ ಯಾರೆಲ್ಲ ಬೈಯುತ್ತಾರೋ ಅವರಿಗೆ ಟಿಕೆಟ್ ಇಲ್ಲ. ಇದರಲ್ಲೇ ಇದೆ ಅಡ್ಜಸ್ಟ್ಮೆಂಟ್ “ನಮ್ಮವರಿಗೆ ಎಂಪಿ ಕೋಟಾ ಬೇಕು ಅಂದಿದ್ದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ‘ಕೋಟ’ ಕೊಟ್ಟುಬಿಟ್ರಾಂತ”, “ಎಲ್ಲಿದೆ ಸಿದ್ಧಾಂತ? ಮೌನಿಯನ್ನು ಅಭ್ಯರ್ಥಿ ಮಾಡಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಸೈಲೆಂಟ್ ಮಾಡಿಬಿಟ್ಟರು”, “ಅಣ್ಣ ಇಲ್ಲಾ ಅಂದರೆ ಎಲ್ಲಾ ಪ್ರೋಗ್ರಾಂ ಕ್ಯಾನ್ಸಲ್ ಆಗುತ್ತದೆ. ರವಿಯ ತಾಕತ್ತು ಜಗತ್ತಿಗೆ ಗೊತ್ತು” ಎಂಬಿತ್ಯಾದಿ ಪೋಸ್ಟ್ಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.