ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಅಮೂಲ್ಯ ಲಿಯೋನ್

ಬೆಂಗಳೂರು ಫೆಬ್ರವರಿ 20: ಸಿಎಎ ವಿರೋಧಿಸಿ ಪ್ರತಿಭಟನೆಯಲ್ಲಿ ಬಾಯಿಗೆ ಬಂದ ಹಾಗೆ ಭಾಷಣ ಮಾಡುತ್ತಿದ್ದ ಅಮೂಲ್ಯ ಲಿಯೋನ್ ಇಂದು ಬೆಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಎರಡು ಬಾರಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಹೇಳಿದ್ದಾಳೆ.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಟಿಪ್ಪು ಸುಲ್ತಾನ್‌ ಯುನೈಟೆಡ್‌ ಫ್ರಂಟ್‌ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಪ್ರತಿಭಟನೆ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಅಮೂಲ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಸಂಸದ ಅಸಾದುದ್ದೀನ್‌ ಓವೈಸಿ ಅವರು ತಕ್ಷಣ ಯುವತಿ ಕೈಯಿಂದ ಮೈಕ್‌ ಎಳೆದುಕೊಂಡು, ‘ಯುವತಿ ಈ ರೀತಿ ರಘೋಷಣೆ ಕೂಗಬಾರದಿತ್ತು. ನಾವು ಈ ಘೋಷಣೆಯನ್ನು ಖಂಡಿಸುತ್ತೇವೆ’ ಎಂದರು. ಸಂಘಟಕರು ಕೂಡಾ ಓವೈಸಿ ಮಾತಿಗೆ ದನಿಗೂಡಿಸಿದರು.

‘ನಮ್ಮದು ಹಿಂದೂಸ್ತಾನ. ನಾವೆಲ್ಲರೂ ಹಿಂದೂಸ್ತಾನಿಗಳು. ಆಕೆ ತಪ್ಪಾಗಿ ಘೋಷಣೆ ಕೂಗಿದ್ದಾಳೆ’ ಎಂದೂ ಅವರು ಹೇಳಿದರು. ಅಷ್ಟರಲ್ಲಿ ಅಮೂಲ್ಯ ಅವರನ್ನು ಪೊಲೀಸರು ಸ್ಥಳದಿಂದ ಕರೆದೊಯ್ದರು.

ಈ ಹಿಂದೆ ಕೂಡ ಮಂಗಳೂರು ಹಾಗೂ ಉಡುಪಿಯಲ್ಲಿ ನಡೆದ ಸಿಎಎ ವಿರೋಧ ಪ್ರತಿಭಟನೆಯಲ್ಲೂ ಕೂಡ ಹಿಂದೂ ಧರ್ಮ ಹಾಗೂ ಮೋದಿ ವಿರುದ್ದ ಬಾಯಿಗೆ ಬಂದಂತೆ ಮಾತನಾಡಿದ್ದಳು, ಅಲ್ಲದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪರ್ತಕರ್ತರೊಬ್ಬರಿಗೆ ವಂದೇಮಾತರಂ ಹೇಳುವಂತೆ ಪೀಡಿಸಿ ಮುಜುಗರವನ್ನು ಉಂಟುಮಾಡಿದ್ದಳು.