ಮಹಿಳೆಯ ಜೀವ ತೆಗೆದ ಖಾಸಗಿ ಬಸ್ ಚಾಲಕನ ಮೊಬೈಲ್ ಮಾತು…

ಉಡುಪಿ: ಖಾಸಗಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೆ ಮೃತ ಪಟ್ಟ ಘಟನೆ ಕಿನ್ನಿಮೂಲ್ಕಿ ಬಳಿ ನಿನ್ನೆ ರಾತ್ರಿ ನಡೆದಿದೆ.

ಮೃತ ಮಹಿಳೆಯನ್ನು ಅಲೆವೂರು ಗ್ರಾಮ ಪಂಚಾಯತ್ ಸದಸ್ಯ ನಂದಗೋಕುಲ ಸುಧಾಕರ್ ಪೂಜಾರಿ ಪತ್ನಿ,ಬ್ಯೂಟಿ ಪಾರ್ಲರ್ ಮಾಲಕಿ ಅಂಬಾಲಪಾಡಿ ನಿವಾಸಿ 35 ವರ್ಷದ ಮಮತ ಪೂಜಾರಿ ಎಂದು ಗುರುತಿಸಲಾಗಿದೆ. ಗರ್ಭವತಿಯಾಗಿರುವ ಮಮತಾ ಅವರು ಕಿನ್ನಿಮೂಲ್ಕಿ ಪೆಟ್ರೊಲ್ ಪಂಪ್‌ ನಲ್ಲಿ ಸ್ಕೂಟಿಗೆ ಇಂಧನ ತುಂಬಿಸಿ ಗೋವಿಂದ ಕಲ್ಯಾಣ ಮಂಟಪ ಕಡೆ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಮಂಗಳೂರಿನಿಂದ ಉಡುಪಿ ಕಡೆ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ಚಾಲಕ ಸ್ಕೂಟಿಯನ್ನು ಗಮನಿಸದೆ ಇದ್ದುದರಿಂದ ಸವಾರೆ ಬಸ್ಸಿನ ಎಡ ಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತ ಪಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬಸ್ ಚಾಲಕ ನಿರ್ಲಕ್ಷ್ಯದಿಂದ ಅಮಾಯಕ ಮಹಿಳೆಯೋರ್ವಳು ಜೀವ ಕಳಕೊಳ್ಳಬೇಕಾಗಿದ್ದು ಬಸ್‌ ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತಾ ಬಸ್ ಚಲಾಯಿಸುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.