LATEST NEWS
ಮಳೆ ಇಲ್ಲದ ದಿನಗಳಲ್ಲಿ ಆಗುಂಬೆ ಘಾಟ್ ನಲ್ಲಿ ಘನ ವಾಹನ ಸಂಚಾರಕ್ಕೆ ಅವಕಾಶ
ಉಡುಪಿ, ನವೆಂಬರ್ 14 : ಮಳೆಗಾಲದ ಭಾರಿ ಮಳೆ ಹಿನ್ನಲೆ ಆಗುಂಬೆ ಘಾಟ್ ನಲ್ಲಿ ಘನ ವಾಹನ ಸಂಚಾರಕ್ಕೆ ಹೇರಿದ್ದ ನಿಷೇಧವನ್ನು ಹಿಂಪಡೆಯಲಾಗಿದ್ದು, ಸತತ ಮಳೆಯಾಗುವ ದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲಿ ಆಗುಂಭೆ ಘಾಟ್ ಪ್ರದೇಶದಲ್ಲಿ ಘನ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವ ಉಡುಪಿ ಜಿಲ್ಲಾಧಿಕಾರಿ ಮಳೆ ಇಲ್ಲದ ದಿನಗಳಲ್ಲಿ 12 ಟನ್ ಗಿಂತ ಅಧಿಕ ಭಾರದ ವಾಹನಗಳು ಆಗುಂಬೆ ಘಾಟ್ ಪ್ರದೇಶದಲ್ಲಿ ಸಂಚರಿಸಬಹುದಾಗಿದ್ದು, ಸತತ ಮಳೆ ಇರುವ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 169 ಎ ರ ತೀರ್ಥಹಳ್ಳಿ-ಉಡುಪಿ-ಮಂಗಳೂರು ರಸ್ತೆಯ ಆಗುಂಬೆ ಘಾಟಿಯ ಮಾರ್ಗದಲ್ಲಿ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಭಾರಿ ಹಾಗೂ ಸತತ ಮಳೆಯಾಗುವ ದಿನಗಳಂದು 12 ಟನ್‌ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ಸಂದರ್ಭ ಪರ್ಯಾಯ ಮಾರ್ಗವಾದ ಉಡುಪಿ-ಬ್ರಹ್ಮಾವರ-ಬಾರ್ಕೂರು-ಶಂಕರನಾರಾಯಣ-ಸಿದ್ಧಾಪುರ-ಹೊಸಗಂಡಿ-ಹುಲಿಕಲ್ ಘಾಟಿ-ಹೊಸನಗರ-ತೀರ್ಥಹಳ್ಳಿ ಹಾಗೂ ಉಡುಪಿ-ಕಾರ್ಕಳ-ಬಜಗೋಳಿ-ಎಸ್.ಕೆ ಬಾರ್ಡರ್-ಕೆರೆಕಟ್ಟೆ-ಶೃಂಗೇರಿ-ಶಿವಮೊಗ್ಗ ಮೂಲಕ ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಹಾಗೂ ಭಾರಿ ಮಳೆ ಇಲ್ಲದಿರುವ ದಿನಗಳಲ್ಲಿ ಎಲ್ಲಾ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.