LATEST NEWS
ತಲಪಾಡಿ ಚೆಕ್ ಪೋಸ್ಟ್ ಗೆ ADGP ಪ್ರತಾಪ್ ರೆಡ್ಡಿ ಭೇಟಿ
ಮಂಗಳೂರು ಅಗಸ್ಟ್ 03: ಕೇರಳದಲ್ಲಿ ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ಕಾಸರಗೋಡು ದಕ್ಷಿಣಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಎರ್ಪಡಿಸಲಾಗಿದ್ದು, ಕೊರೊನಾ ನೆಗೆಟಿವ್ ವರದಿ ಇಲ್ಲದವರಿಗೆ ಕರ್ನಾಟಕ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಇಂದು ಮಂಗಳೂರಿನ ತಲಪಾಡಿ ಚೆಕ್‌ಪೋಸ್ಟ್‌ಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡಿ ಭದ್ರತೆ ಬಗ್ಗೆ ತಪಾಸಣೆ ನೀಡಿದರು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ, ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ರೆಡ್ಡಿ ರಾಜ್ಯ ಸರ್ಕಾರದ ಸೂಚನೆಯಂತೆ ನೆಗೆಟಿವ್ ವರದಿ ಇಲ್ಲದವರಿಗೆ ಕರ್ನಾಟಕ ಪ್ರವೇಶಕ್ಕೆ ಅವಕಾಶ ಇಲ್ಲ, ಕೇವಲ ತುರ್ತು ಭೇಟಿಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನು ಕೇರಳ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ ಟಿಕೆಟ್ ತೋರಿಸಿದರೆ ಜಿಲ್ಲೆಯೊಳಗೆ ಬಿಡಲಾಗುತ್ತದೆ.
ಕಾಸರಗೋಡು ಭಾಗದಲ್ಲಿ ಕೊರೊನಾ ಸೋಂಕು ಅತೀ ಹೆಚ್ಚು ಇರುವುದರಿಂದ ಬಿಗಿ ತಪಾಸಣೆ ಮಾಡುತ್ತಿದ್ದೇವೆ. ಕೇರಳದಿಂದ ರೈಲು ಮಾರ್ಗವಾಗಿ ಬಂದವರನ್ನೂ ಪರೀಕ್ಷೆ ಮಾಡುತ್ತಿದ್ದೇವೆ. ಮಂಗಳೂರಿನ ಟೌನ್ ಹಾಲ್ ನಲ್ಲಿ ಪರೀಕ್ಷಾ ಕೇಂದ್ರ ತೆರೆದಿದ್ದೇವೆ ಎಂದರು. ಕಾಸರಗೋಡು ಡಿಸಿ,ಎಸ್ಪಿ ಜೊತೆ ಜಿಲ್ಲೆಯ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ,ಉಭಯ ಜಿಲ್ಲೆಗಳ ನಡುವೆ ಯಾವುದೇ ಗೊಂದಲಗಳಿಲ್ಲ. ಕೇರಳದಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುವ ತನಕ ಈ ನಿರ್ಬಂಧ ಇರುತ್ತದೆ ಎಂದು ತಲಪಾಡಿ ಗಡಿಭಾಗದಲ್ಲಿ ADGP ಪ್ರತಾಪ್ ರೆಡ್ಡಿ ಹೇಳಿದ್ದಾರೆ.