LATEST NEWS
ಶಾಸಕರ ಪ್ರಾಮಾಣಿಕರು ಹೌದಾದರೆ, ಮುಖ್ಯಮಂತ್ರಿಗೆ ಒತ್ತಡ ಹೇರಿ ತನಿಖೆಗೆ ಆದೇಶಿಸಲಿ
ಶಾಸಕರ ಪ್ರಾಮಾಣಿಕರು ಹೌದಾದರೆ, ಮುಖ್ಯಮಂತ್ರಿಗೆ ಒತ್ತಡ ಹೇರಿ ತನಿಖೆಗೆ ಆದೇಶಿಸಲಿ
ಮಂಗಳೂರು ಫೆಬ್ರವರಿ 16: ಎಡಿಬಿ ಎರಡನೇ ಹಂತದ ಸಾಲದಲ್ಲಿ ಕೆಯುಐಡಿಎಫ್ ಸಿ ಹಮ್ಮಿಕೊಂಡಿರುವ ಪಂಪಿಂಗ್ ಮೇನ್ ಬದಲಾವಣೆ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಶಾಸಕರಾದ ಜೆ ಆರ್ ಲೋಬೊ, ಮೊಯ್ದಿನ್ ಬಾವಾರ ಶಾಮೀಲಾತಿಯ ಕುರಿತ ಆರೋಪಕ್ಕೆ ನಾನು ಈಗಲೂ ಬದ್ದ. ಇಂದು ನಗರ ಪಾಲಿಕೆಯಲ್ಲಿ ಪಂಪಿಂಗ್ ಮೇನ್ ಸಹಿತ ಎಡಿಬಿ ಅನುದಾನದ ಯೋಜನೆಗಳ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಶಾಸಕ ಮೊಯ್ದಿನ್ ಬಾವಾ ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಕುಡ್ಸೆಂಪ್ ಕಳಪೆ ಕಾಮಗಾರಿಯ ಕುರಿತ ಆರೋಪಗಳನ್ನು ಒಪ್ಪಿಕೊಳ್ಳುತ್ತಲೇ ತಾನು ಪ್ರಾಮಾಣಿಕ ಎಂದು ಘೋಷಿಸಿದ್ದಾರೆ. ನನ್ನ ಆರೋಪಗಳಿಂದ ನೋವಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಶಾಸಕ ಮೊಯ್ದಿನ್ ಬಾವ ಪ್ರಾಮಾಣಿಕರಾಗಿದ್ದಲ್ಲಿ ಯೋಜನೆಯ ಮೊತ್ತವನ್ನು 60 ಕೋಟಿಯಿಂದ 94 ಕೋಟಿಗೆ ಏರಿಸಿ ಸಾರ್ವಜನಿಕರ ನಿಧಿ ದುರುಪಯೋಗಿಸುವಾಗ ಮೌನ ವಹಿಸಿದ್ದು ಯಾಕೆ ? ಶಾಸಕರ ಗಮನಕ್ಕೆ ಬಾರದೆ ಯೋಜನೆಗಳು ಟೆಂಡರ್ ಹಂತಕ್ಕೆ ಹೋಗಲು ಸಾಧ್ಯವೆ ? ಶಾಸಕ ಮೊಯ್ದಿನ್ ಬಾವಾರ ಪ್ರಮಾಣಿಕತೆ ನೈಜವಾದದ್ದಾದರೆ, ತಕ್ಷಣವೇ ಮಧ್ಯಪ್ರವೇಶ ನಡೆಸಲಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಟೆಂಡರ್ ತಡೆ ಹಿಡಿದು ತನಿಖೆಗೆ ಆದೇಶ ಹೊರಡಿಸಲಿ ಎಂದು ಮುನೀರ್ ಕಾಟಿಪಳ್ಳ ಶಾಸಕರಿಗೆ ಪ್ರತ್ಯುತ್ತರ ನೀಡಿದ್ದಾರೆ.