Connect with us

FILM

ಹಿಮಾಚಲ ಪ್ರದೇಶ ಹುಡುಗಿಯ ಪತ್ರೊಡೆ ಪ್ರೀತಿ

ಮುಂಬೈ: ಬಾಲಿವುಡ್ ನ ಪೈರಿಂಗ್ ಬ್ರ್ಯಾಂಡ್ ಖ್ಯಾತಿಯ ನಟಿ ಕಂಗಾನಾ ರಾಣಾವತ್ ಕರಾವಳಿಯ ಖಾದ್ಯ ಪತ್ರೋಡೆಯನ್ನು ಸವಿದಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ತುಳುನಾಡಿನ ಪ್ರತೀ ಮನೆಯಲ್ಲಿ ಆಟಿ ತಿಂಗಳಿನಲ್ಲಿ ತಯಾರಿಸುವ ಖಾದ್ಯ ಪತ್ರೊಡೆಗೆ ಬಾಲಿವುಡ್‌‌ ನಟಿ ಕಂಗನಾ ರನಾವತ್‌ ಅವರು ಫಿದಾ ಆಗಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ನನ್ನ ತಾಯಿ ನನಗೆ ಇಷ್ಟವಾದ ಪತ್ರೊಡೆ ಹಾಗೂ ಲಸ್ಸಿ ಮಾಡಿಕೊಟ್ಟರು. ಕೆಸುವಿನ ಎಲೆ ಹಾಗೂ ತುಳಸಿ ಎಲೆಯನ್ನು ಬಳಸಿ ಹಬೆಯಲ್ಲಿ ಬೇಯಿಸಿ, ತುಪ್ಪದಲ್ಲಿ ಹುರಿದು ಮಾಡಲಾದ ಪತ್ರೊಡೆ ತುಂಬಾ ರುಚಿಕರವಾಗಿತ್ತು ಎಂದು ಬರೆದುಕೊಂಡಿದ್ದಾರೆ.


ಮಳೆಗಾಲ ಬಂತೆಂದರೆ ಸಾಕು ಕರಾವಳಿ ಭಾಗದಲ್ಲಿ ಕೆಸು ಬೆಳೆಯಲು ಆರಂಭಿಸುತ್ತದೆ. ಮೂರ್ನಾಲ್ಕು ತಿಂಗಳುಗಳ ಕಾಲ ಕೆಸುವಿನ ಎಲೆಯಲ್ಲಿ ಹಲವಾರು ಖಾದ್ಯಗಳನ್ನು ಕರಾವಳಿಗರು ತಯಾರು ಮಾಡುತ್ತಾರೆ. ಕೆಸುವಿನ ಎಲೆಯ ಪತ್ರೊಡೆ, ಕೆಸುವಿನ ಎಲೆಯ ಸಾರು, ಕೆಸುವಿನ ಎಲೆಯ ಚಟ್ನಿ, ಕೆಸುವಿನ ಕಾಂಡದ ಪಲ್ಯ ಹೀಗೆ ವಿವಿಧ ಖಾದ್ಯಗಳು ಕೆಸುವಿಂದ ಆಗುತ್ತದೆ.


ಹಿಮಾಚಲ ಪ್ರದೇಶದ ಕಂಗನಾಳಿಗೂ ಕೆಸುವಿನ ಪತ್ರೊಡೆ ಅಂದರೆ ಇಷ್ಟ. ತಮ್ಮ ತಾಯಿ ಪತ್ರೊಡೆಯನ್ನು ತಯಾರು ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕಂಗನಾ ಟ್ವೀಟ್‍ಗೆ ಕರಾವಳಿಯ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ.


ಕೆಸುವಿನ ಎಲೆಯಲ್ಲಿ ಅಗಾಧವಾದ ರೋಗನಿರೋಧಕ ಶಕ್ತಿ ಇದ್ದು, ಮಳೆಗಾಲದಲ್ಲಿ ಎಲೆಯನ್ನು ತಿಂದರೆ ದೇಹದ ಶಕ್ತಿ ವೃದ್ಧಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹೊಟ್ಟೆ ಸೇರಿರುವ ಉಗುರು, ತಲೆಗೂದಲಿನಂತಹ ಕರಗದ ವಸ್ತುಗಳನ್ನು ಕರಗಿಸುವ ಶಕ್ತಿ ಕೆಸುವಿನ ಎಲೆಗೆ ಮಾತ್ರ ಇರುತ್ತದೆ ಎಂಬುದು ಆಯುರ್ವೇದದಲ್ಲಿ ಸಾಬೀತಾಗಿದೆ. ಕರಾವಳಿಗರು ಮಳೆಗಾಲದಲ್ಲಿ ಒಂದೆರಡು ಬಾರಿಯಾದರೂ ಆಹಾರದಲ್ಲಿ ಕೆಸುವನ್ನು ಬಳಸುತ್ತಾರೆ. ಇದೀಗ ಕಂಗನಾ ರಾಣಾವತ್ ಪತ್ರೋಡೆ ಬಗ್ಗೆ ಪ್ರಸ್ತಾಪ ಮಾಡಿದ್ದು, ಕೆಸುವಿಗೆ ದೇಶ ಮಟ್ಟದಲ್ಲಿ ಪ್ರಚಾರ ಸಿಕ್ಕಂತಾಗಿದೆ