KARNATAKA
ಎಸಿಬಿ ದಾಳಿ……ಮನೆಯ ಪೈಪ್ ನಲ್ಲಿ ಕಂತೆ-ಕಂತೆ ಹಣ..!
ಕಲಬುರಗಿ : ರಾಜ್ಯದಲ್ಲಿ ಇಂದು ನಡೆದ ಎಸಿಬಿ ದಾಳಿ ಭಾರೀ ಸದ್ದು ಮಾಡುತ್ತಿದೆ. ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳಿಗೆ ಸಂಬಂಧಿಸಿದ 68 ಕಡೆಗಳಲ್ಲಿ ಎಸಿಬಿ ತಂಡ ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದು 408 ಎಸಿಬಿ ಅಧಿಕಾರಿಗಳು ಅಕ್ರಮ ಸಂಪತ್ತಿನ ಬೆನ್ನ ಹತ್ತಿ ಹೊರಟಿದ್ದಾರೆ.
ಈ ನಡುವೆ ಕಲಬುರಗಿಯಲ್ಲಿ ಎಸಿಬಿ ಅಧಿಕಾರಿಗಳಿಗೆ ಭ್ರಷ್ಟ ಅಧಿಕಾರಿಯೊಬ್ಬ ತನ್ನ ಅಕ್ರಮ ಸಂಪತ್ತನ್ನು ಉಳಿಸಿಕೊಳ್ಳಲು ಮಾಡಿದ ಐಡಿಯಾ ಶಾಕ್ ನೀಡಿದೆ. ಪಿಡಬ್ಲೂಡಿ ಜೆ.ಇ. ಶಾಂತಗೌಡ ಬಿರಾದಾರ್ ಮನೆ, ಕಚೇರಿ ಮತ್ತು ಯಡ್ರಾಮಿಯಲ್ಲಿರುವ ತೋಟದ ಮನೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಮನೆಯ ನೀರಿನ ಪೈಪ್ ಗಳಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಬರುತ್ತಿದ್ದಂತೆಯೇ ಭ್ರಷ್ಟ ಅಧಿಕಾರಿ ಶಾಂತಗೌಡ ಮತ್ತು ಕುಟುಂಬ ನೀರಿನ ಪೈಪ್ ನಲ್ಲಿ ಹಣ ಹಾಕಿದ್ದರು.
ಗುಬ್ಬಿ ಕಾಲೊನಿ ಮನೆಯ ತಿಜೋರಿ, ಬೆಡ್ ರೂಮ್ ಜಾಲಾಡಿದ ತಂಡಕ್ಕೆ ಪ್ಲಂಬಿಂಗ್ ಪೈಪ್‌ನಲ್ಲಿ ಹಣ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಪ್ಲಂಬರ್ ಕರೆದು ಪೈಪ್ ಕೊರೆಸಿದಾಗ ₹ 500 ಮುಖಬೆಲೆಯ ನೋಟುಗಳು ಸಿಕ್ಕಿವೆ. ಎಸಿಬಿ ಮೂಲಗಳ ಪ್ರಕಾರ ಶಾಂತನಗೌಡರ್ ಮನೆಯ ಪೈಪ್ ಗಳಲ್ಲಿ ಅಡಗಿಸಿಟ್ಟಿದ್ದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು ಈ ವೇಳೆ ಸುಮಾರು 5 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇಲ್ಲಿಯವರೆಗೆ ₹ 40 ಲಕ್ಷ ನಗದು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.