LATEST NEWS
ಬೆಳ್ಳಂಬೆಳಗ್ಗೆ ಎಸಿಬಿ ರೈಡ್ ; ಮಂಗಳೂರು ಸೇರಿ ವಿವಿಧೆಡೆ ಕೋಟ್ಯಂತರ ಆಸ್ತಿ ಪತ್ತೆ
ಕೆಐಎಡಿಬಿ ಭೂಸ್ವಾಧೀನಧಿಕಾರಿ ಆಗಿದ್ದ ದಾಸೇಗೌಡ ಎಸಿಬಿ ಬಲೆಗೆ
ಮಂಗಳೂರು, ಜೂನ್ 12 : ರಾಜ್ಯದ ವಿವಿಧೆಡೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಸಸ್ಪೆಂಡ್ ಆಗಿದ್ದ ದಾಸೇಗೌಡಗೆ ಸೇರಿದ ವಿವಿಧ ಕಡೆ ದಾಳಿ ನಡೆದಿದ್ದು ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. ಮಂಗಳೂರಿನ ಬಿಜೈನಲ್ಲಿ ಅಪಾರ್ಟ್ ಮೆಂಟಿನ ನಿವಾಸಕ್ಕೆ ದಾಳಿ ನಡೆಸಿದ ಅಧಿಕಾರಿಗಳು ಅಪಾರ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ದಾಸೇಗೌಡ, ಮೈಸೂರಿನಲ್ಲಿ ನಾಲ್ಕು ಕಡೆ ಸೈಟ್, ಬೆಂಗಳೂರಿನಲ್ಲಿ ಎರಡು ಕಡೆ ಆಸ್ತಿ, ಮಂಡ್ಯದಲ್ಲಿ ಎರಡು ಕಡೆ ಮನೆ, ಹಾಸನದಲ್ಲೂ ಫ್ಲಾಟ್ ಹೊಂದಿರುವುದು ಪತ್ತೆಯಾಗಿದೆ.
ಮಂಗಳೂರು ಮತ್ತು ಮಂಡ್ಯದಲ್ಲಿ ಎಸಿಬಿ ಏಕಕಾಲಕ್ಕೆ ದಾಳಿ ನಡೆದಿದ್ದು ಮಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಮಂಗಳೂರಿನಲ್ಲಿ ಡಿ.19 ರಂದು 5 ಲಕ್ಷ ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದಿದ್ದ ದಾಸೇಗೌಡರನ್ನು ಅಂದಿನಿಂದಲೇ ಅಮಾನತಿನಲ್ಲಿ ಇರಿಸಲಾಗಿತ್ತು. ಆನಂತ್ರ ಮಂಗಳೂರು ನಗರದಲ್ಲಿ ಕರ್ಫ್ಯೂ ಮತ್ತು ಕೊರೊನಾ ಲಾಕ್ ಡೌನ್ ಇದ್ದಿದ್ರಿಂದ ಕಾರ್ಯಾಚರಣೆ ಮುಂದೂಡಿದ್ದ ಎಸಿಬಿ ಇಂದು ದಾಳಿ ಮುಂದುವರಿಸಿದೆ.
ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆಯಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಕಡೆ 11 ಸೈಟ್, ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಮಂಗಳೂರು ಎಸಿಬಿ ಎಸ್ಪಿ ಉಮಾಪ್ರಶಾಂತ್, ಡಿವೈಎಸ್ಪಿ ಮಂಜುನಾಥ್, ಇನ್ಸ್ ಪೆಕ್ಟರ್ ಯೋಗೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ.