Connect with us

KARNATAKA

ಯುವತಿಯ ಮೂಗು ಮುರಿದ ಜೊಮ್ಯಾಟೊ ಡೆಲಿವರಿ ಬಾಯ್..!

ಬೆಂಗಳೂರು, ಮಾರ್ಚ್ 11: ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಜೊಮ್ಯಾಟೊ ಡೆಲಿವರಿ ಬಾಯ್‌ನನ್ನು ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು ಬಂಧಿಸಿದ್ದಾರೆ. ಆಹಾರ ಆರ್ಡರ್ ಮಾಡಿ ತುಂಬಾ ಹೊತ್ತಾಯಿತು ಯಾಕಿಷ್ಟು ತಡ ಎಂದು ಕೇಳಿದ್ದಕ್ಕೆ ಡೆಲಿವರಿ ಬಾಯ್ ಯುವತಿಯ ಜತೆ ಕೆಟ್ಟದಾಗಿ ವರ್ತಿಸಿದ್ದಷ್ಟೇ ಅಲ್ಲದೆ, ಆಹಾರ ಪ್ಯಾಕ್‌ಗಳನ್ನು ವಾಪಸ್ ಪಡೆದು ಯುವತಿ ಮೂಗಿಗೆ ಗುದ್ದಿ ಹೊರಟು ಹೋಗಿದ್ದ.

ಸ್ಥಳೀಯ ನಿವಾಸಿಯಾಗಿದ್ದ, ಡೆಲಿವರಿ ಬಾಯ್ ಕಾಮರಾಜ್‌ನನ್ನು ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು ಬಂಧಿಸಿದ್ದಾರೆ. ಯುವತಿ ಜೊಮ್ಯಾಟೊದಲ್ಲಿ ಮಂಗಳವಾರ ಮಧ್ಯಾಹ್ನ 3.30ರಷ್ಟೊತ್ತಿಗೆ ಆಹಾರ ಆರ್ಡರ್ ಮಾಡಿದ್ದಾರೆ, ಸಾಮಾನ್ಯವಾಗಿ 4.30ರಷ್ಟೊತ್ತಿಗೆ ಬರಬೇಕಿತ್ತು, ಆದರೂ ಬಂದಿರಲಿಲ್ಲ ಬಳಿಕ ಗ್ರಾಹಕರ ಸೇವಾ ಕೇಂದ್ರಕ್ಕೆ ಕರೆ ಮಾಡಿ ವಿಚಾರಿಸಿದ್ದಾರೆ.

ಇನ್ನೇನು ಆರ್ಡರ್ ಕ್ಯಾನ್ಸಲ್ ಮಾಡಬೇಕು ಎನ್ನುವಷ್ಟರಲ್ಲಿ ಆತ ಬಂದಿದ್ದಾನೆ, ಯಾಕಿಷ್ಟು ತಡವಾಗಿದೆ, ನನಗೆ ಊಟವನ್ನು ಉಚಿತವಾಗಿ ಕೊಡುತ್ತೀರಾ ಎಂದು ಕೇಳಿದ್ದಾರೆ. ಜೊಮ್ಯಾಟೊದಿಂದ ಕರೆ ಬರುವವರೆಗೆ ಇಲ್ಲೇ ಕಾಯಿರಿ ಎಂದು ಹೇಳಿದ್ದಕ್ಕೆ ಆಹಾರ ಪೊಟ್ಟಣವನ್ನು ಕಿತ್ತುಕೊಂಡು, ನಾನೇನು ನಿಮ್ಮ ಮನೆ ಆಳ ಎಂದು ಕೂಗಾಡಿ, ಆಕೆಯ ಮೂಗಿಗೆ ಗುದ್ದಿ ಅಲ್ಲಿಂದ ಹೋಗಿದ್ದ.

ಬಳಿಕ ಯುವತಿ ಮೂಗಿನಲ್ಲಿ ರಕ್ತಸ್ರಾವ ಹೆಚ್ಚಾಗಿ ಆಸ್ಪತ್ರೆಗೆ ತೆರಳಿದರು, ಬಳಿಕ ಮೂಗಿನ ಮೂಳೆ ಮುರಿದಿದೆ ಸರ್ಜರಿ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ, ತಕ್ಷಣ ಆಕೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು. ಇದೀಗ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಘಟನೆ ಬಳಿಕ ಯುವತಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದರು. ತಮ್ಮ ಮೇಲಾಗಿರುವ ಹಲ್ಲೆ ವಿವರಿಸಿ ಅಳಲು ತೋಡಿಕೊಂಡಿದ್ದಾರೆ.