Connect with us

    LATEST NEWS

    ಆರೋಗ್ಯಕರ ದಿನಚರಿ: ದೇಹ ಮತ್ತು ಮನಸ್ಸುಗಳ ನಡುವಿನ ಲಯವನ್ನು ಹೊಂದಿಸುವುದು

    ಆರೋಗ್ಯಕರ ದಿನಚರಿ ಎನ್ನುವುದು ಸಂಪೂರ್ಣ ಆರೋಗ್ಯದತ್ತ ಬಹಳ ಮುಖ್ಯ ಹೆಜ್ಜೆಯಾಗಿದೆ. ನಿಮ್ಮ ದಿನಚರಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಣ್ಣ ಸಣ್ಣ ಹೆಜ್ಜೆಗಳು ದೀರ್ಘಾವಧಿಯಲ್ಲಿ ನಿಮ್ಮ ಆರೋಗ್ಯದ ಮೇಲೆ ಬಹಳ ದೊಡ್ಡ ಪ್ರಭಾವವನ್ನು ಬೀರುತ್ತವೆ. ಈ ನಿಟ್ಟಿನಲ್ಲಿ ಒಂದೇ ಬಾರಿಗೆ ದೊಡ್ಡ ಹೆಜ್ಜೆಯನ್ನಿಡುವುದಕ್ಕಿಂತ ಸಣ್ಣ ಹೆಜ್ಜೆಯಿಂದ ಆರಂಭಿಸುವುದು ಉತ್ತಮ. ಉತ್ತಮ ಆರೋಗ್ಯವನ್ನು ಪಡೆಯಲು ಜೀವನಶೈಲಿಯಲ್ಲಿ ಬುದ್ಧಿವಂತ ಮಾರ್ಪಾಡುಗಳ ಅಗತ್ಯ ಬಹಳಷ್ಟಿದೆ. ಉದಾಹರಣೆಗೆ, ಆರೋಗ್ಯವಂತ ಹೃದಯ, ಬಲಿಷ್ಠ ಶರೀರ ಹಾಗೂ ದೃಢ ಮನಸ್ಸನ್ನು ಪಡೆಯಲು ನಿಯಮಿತವಾದ ವ್ಯಾಯಾಮ ಸಹಾಯ ಮಾಡುತ್ತದೆ.

    ವಿಭಿನ್ನ ಋತುಗಳಲ್ಲಿ ಹಾಗೂ ದಿನದ ಬೇರೆ ಬೇರೆ ಸಮಯಗಳಲ್ಲಿ ನಮ್ಮ ಶರೀರವು ಬೇರೆ ಬೇರೆ ಲಯದಲ್ಲಿ ಕೆಲಸ ಮಾಡುತ್ತದೆ. ನಾವು ನಮ್ಮ ಶರೀರ ಹಾಗೂ ಮನಸ್ಸಿನ ನಡುವೆ ಹೊಂದಾಣಿಕೆ ಮಾಡಿಕೊಂಡರೆ ಹಾರ್ಮೋನ್ ಗಳು ಮತ್ತು ಕಿಣ್ವಗಳು ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ ಬಿಡುಗಡೆಯಾಗಿ ಶರೀರದ ಸೂಕ್ತ ಪೋಷಣೆ ಹಾಗೂ ಬೆಳವಣಿಗೆಗೆ ಕಾರಣವಾಗುತ್ತದೆ. ಇದರಿಂದ ಶರೀರವು ರೋಗಕ್ಕೆ ತುತ್ತಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಅದೇ ರೀತಿ ಶರೀರದ ವಿವಿಧ ಅಂಗಗಳು ಮತ್ತು ಅಂಗಾಂಗ ವ್ಯವಸ್ಥೆಗಳಲ್ಲಿ ವಿಷಾಂಶಗಳು ಸಂಗ್ರಹಗೊಳ್ಳುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

    ಉದಾಹರಣೆಗೆ, ನೀವು ಪ್ರತಿದಿನ ನಿಗದಿತ ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯ ಅಭ್ಯಾಸ ರೂಢಿಸಿಕೊಂಡರೆ, ಹೊಟ್ಟೆ ಹಾಗೂ ಕರುಳಿನ ಕಿಣ್ವಗಳು ನಿಗದಿತ ಸಮಯದಲ್ಲೇ ಬಿಡುಗಡೆಯಾಗಿ ಜೀರ್ಣಾಂಗ ವ್ಯೂಹವು ಸುಸ್ಥಿತಿಯಲ್ಲಿರುತ್ತದೆ. ಆಹಾರ ಸೇವನೆಯ ಸಮಯ ಹಾಗೂ ಆಹಾರದ ಪ್ರಮಾಣದಲ್ಲಿ ಏರುಪೇರಾಗುತ್ತಿದ್ದರೆ, ಶರೀರಕ್ಕೂ ಕೂಡಾ ಕಿಣ್ವಗಳನ್ನು ಬಿಡುಗಡೆ ಮಾಡುವ ಸಮಯ ಹಾಗೂ ಪ್ರಮಾಣವನ್ನು ಸಮತೋಲನಗೊಳಿಸಲು ಕಷ್ಟವಾಗುತ್ತದೆ. ಆದುದರಿಂದ, ಕೆಲವು ಸಂದರ್ಭಗಳಲ್ಲಿ ಆಹಾರವು ಹೊಟ್ಟೆಯನ್ನು ಸೇರಿದಾಗ ಅಗತ್ಯ ಪ್ರಮಾಣದ ಕಿಣ್ವಗಳು ಬಿಡುಗಡೆಯಾಗಿರುವುದಿಲ್ಲ, ಇನ್ನು ಕೆಲವು ಬಾರಿ ಸಾಕಷ್ಟು ಪ್ರಮಾಣದ ಕಿಣ್ವಗಳು ಬಿಡುಗಡೆಯಾಗಿದ್ದರೂ ಆ ಸಮಯಕ್ಕೆ ಸರಿಯಾಗಿ ಆಹಾರ ಹೊಟ್ಟೆಯನ್ನು ಸೇರುವುದಿಲ್ಲ, ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ರೋಗಗಳ ಉತ್ಪತ್ತಿಗೆ ಕಾರಣವಾಗುತ್ತದೆ.

    xr:d:DAFAYfgCzJ4:601,j:37595416785,t:22101013

    ಈ ಸಿದ್ಧಾಂತವು ಕೇವಲ ಹೊಟ್ಟೆಗೆ ಮಾತ್ರ ಅನ್ವಯವಲ್ಲ, ಬದಲಾಗಿ ಶರೀರ ಮತ್ತು ಮನಸ್ಸಿನ ಇತರ ಅಂಶಗಳಿಗೂ ಅನ್ವಯವಾಗುತ್ತದೆ. ಆದ್ದರಿಂದ ವ್ಯವಸ್ಥಿತ ಮತ್ತು ಲಯಬದ್ಧ ಜೀವನಶೈಲಿಯಲ್ಲಿ ಉತ್ತಮ ಆರೋಗ್ಯದ ರಹಸ್ಯವು ಅಡಕವಾಗಿದೆ. ಮನುಷ್ಯನ ಮಾನಸಿಕ ಸ್ಥಿತಿಗತಿ ಮತ್ತು ಆರೋಗ್ಯಕರ ದಿನಚರಿಯ ನಡುವೆ ನೇರ ಸಂಬಂಧವಿದೆ. ಉದಾಹರಣೆಗೆ, ಯಾವಾಗ ನಿಮ್ಮ ಕೋಣೆ ಶುಚಿಯಾಗಿ ಮತ್ತು ಅಚ್ಚುಕಟ್ಟಾಗಿರುತ್ತದೆಯೋ ಆಗ ನಿಮ್ಮ ಮನಸ್ಸು ಶಾಂತವಾಗಿಯೂ, ಸಂತೋಷವಾಗಿಯೂ ಇರುತ್ತದೆ. ಇದಕ್ಕೆ ವಿರುದ್ಧವಾಗಿ, ನಿಮ್ಮ ಕೋಣೆಯು ಕ್ರಮಬದ್ಧವಾಗಿರದಿದ್ದರೆ, ಸಣ್ಣಮಟ್ಟಿನ ಕಿರಿಕಿರಿಯೂ ಕೂಡಾ ಮನಸ್ಸಿಗೆ ನೋವನ್ನು ಉಂಟುಮಾಡುತ್ತದೆ. ಆದುದರಿಂದ ಆರೋಗ್ಯಕರ ದಿನಚರಿಯು ಪರಿಪೂರ್ಣ ಆರೋಗ್ಯಕ್ಕೆ ಕಾರಣವಾಗುತ್ತದೆ.

    ದೇಹ ಮತ್ತು ಮನಸ್ಸನ್ನು ಲಯಬದ್ಧವಾಗಿಸುವುದು:
    ಪರಿಪೂರ್ಣ ಆರೋಗ್ಯವನ್ನು ಹೊಂದುವುದಕ್ಕಾಗಿ ಆಯುರ್ವೇದವು ನಮಗೆ ಅನೇಕ ಅಮೂಲ್ಯ ಆರೋಗ್ಯ ರಹಸ್ಯಗಳನ್ನು ನೀಡಿದೆ. ಉತ್ತಮ ಆರೋಗ್ಯ ಮತ್ತು ಶರೀರದ ಸ್ವಾಸ್ಥ್ಯಕ್ಕೆ ಕೇವಲ ಆಹಾರ, ಆಹಾರ ಪೂರಕ ಅಥವಾ ನಾವು ತೆಗೆದುಕೊಳ್ಳುವ ಔಷಧಿಗಳು ಮಾತ್ರ ಕಾರಣವಲ್ಲ, ಬದಲಾಗಿ ಇದರಲ್ಲಿ ನಮ್ಮ ಇತರ ದೈನಂದಿನ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳ ಕೊಡುಗೆಯೂ ಇದೆ.

    ಸಮಗ್ರ ಆರೋಗ್ಯ ಪರಿಕಲ್ಪನೆ:
    ದೇಹ ಮತ್ತು ಮನಸ್ಸಿನಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ಉತ್ಪನ್ನಗಳನ್ನು (ಮತ್ತು ಭಾವನೆಗಳನ್ನು) ಸೂಕ್ತ ಸಮಯದಲ್ಲಿ ಹೊರಹಾಕುವುದು ಅತೀ ಅಗತ್ಯ. ಇದನ್ನು ಆಯುರ್ವೇದದಲ್ಲಿ ಬಹಳ ಸ್ಪಷ್ಟವಾಗಿ ವಿವರಿಸಲಾಗಿದೆ. ಆಯುರ್ವೇದವು ಈ ನಿಟ್ಟಿನಲ್ಲಿ ಎರಡು ತತ್ವಗಳನ್ನು ಪ್ರತಿಪಾದಿಸುತ್ತದೆ.

    ೧. ಶರೀರದ ನೈಸರ್ಗಿಕ ಕ್ರಿಯೆಗಳಿಗೆ ಪ್ರಚೋದನೆಯುಂಟಾದಾಗ ಅದನ್ನು ತಡೆ ಹಿಡಿಯದಿರುವುದು. ಉದಾಹರಣೆಗೆ – ಹಸಿದಾಗ ಆಹಾರ ಸೇವನೆ ಮಾಡುವುದು.
    ೨. ನೈಸರ್ಗಿಕ ಕ್ರಿಯೆಗಳ ಪ್ರಚೋದನೆ ಇಲ್ಲದಿರುವಾಗ ಸ್ವಯಂಪ್ರೇರಣೆಯಿಂದ ಪ್ರಚೋದಿಸದಿರುವುದು. ಉದಾಹರಣೆಗೆ – ಹಸಿವೆ ಇಲ್ಲದಿರುವಾಗ ಆಹಾರ ಸೇವನೆ ಮಾಡದಿರುವುದು.

    ಈ ಕೆಳಗಿನ ನೈಸರ್ಗಿಕ ಪ್ರಚೋದನೆಗಳನ್ನು ಸ್ವಯಂಪ್ರೇರಣೆಯಿಂದ ಪ್ರಚೋದಿಸುವುದು ಮತ್ತು ತಡೆ ಹಿಡಿಯುವುದು ಸರಿಯಲ್ಲ:

    ಉದರವಾಯು:
    ಸಾಮಾನ್ಯವಾಗಿ ಇದನ್ನು ಸಾರ್ವಜನಿಕವಾಗಿ ತಡೆ ಹಿಡಿಯದಿರುವುದು ಮುಜುಗರವನ್ನುಂಟುಮಾಡುವ ವಿಷಯವಾದರೂ, ಆರೋಗ್ಯದ ದೃಷ್ಟಿಯಿಂದ ಅದು ಸರಿಯಲ್ಲ ಎನ್ನುತ್ತದೆ ಆಯುರ್ವೇದ.

    ಮೂತ್ರ ಮತ್ತು ಮಲ:
    ಬಿಡುವಿಲ್ಲದ ಆಧುನಿಕ ಜೀವನದಲ್ಲಿ ವೃತ್ತಿ ಜೀವನದ ಅನೂಕೂಲತೆಗಾಗಿ ಶಾರೀರಿಕ ಪ್ರಚೋದನೆಗಳಿಲ್ಲದಿದ್ದರೂ ಶೌಚಾಲಯದ ಉಪಯೋಗ ಅನಿವಾರ್ಯವಾಗುತ್ತದೆ. ಆದರೆ ಪ್ರಚೋದನೆಯಿಲ್ಲದೆ ಕರ್ಮವನ್ನು ಪೂರೈಸಲು ಪ್ರಯತ್ನಿಸುವುದು ಮತ್ತು ಪ್ರಚೋದನೆಯಿದ್ದಾಗ ತಡೆ ಹಿಡಿಯುವುದು ಒಳ್ಳೆಯ ಅಭ್ಯಾಸವಲ್ಲ.

    ಕೆಮ್ಮು, ಸೀನು, ಹಸಿವು ಮತ್ತು ಬಾಯಾರಿಕೆ:
    ಇವುಗಳಲ್ಲಿ ಹಸಿವು ಅತ್ಯಂತ ಪ್ರಾಮುಖ್ಯವಾದುದು. ಕೇವಲ ಹಸಿದಾಗ ಮಾತ್ರ ಆಹಾರ ಸೇವಿಸುವುದು ಮತ್ತು ಹಸಿವಿಲ್ಲದಿರುವಾಗ ಆಹಾರ ಸೇವನೆ ಮಾಡದಿರುವುದರಿಂದ ಹೆಚ್ಚಿನ ಎಲ್ಲಾ ಕಿಣ್ವ ಸಂಬಂಧಿ ಅಸಮತೋಲನ, ಜಠರದ ಸಮಸ್ಯೆಗಳು ಇತ್ಯಾದಿಗಳನ್ನು ದೂರವಿರಿಸಬಹುದು. ಕೆಮ್ಮು, ಸೀನು ಮತ್ತು ಬಾಯಾರಿಕೆಗೆ ಕೂಡಾ ಇದೇ ನಿಯಮ ಅನ್ವಯವಾಗುತ್ತದೆ.

    ನಿದ್ರೆ:
    ಬೆಳಿಗ್ಗೆ ಬೇಗನೆ ಎದ್ದೇಳುವುದು ಎಷ್ಟು ಮುಖ್ಯವೋ, ಕಣ್ಣು ಮತ್ತು ದೇಹಕ್ಕೆ ನಿದ್ರೆಯ ಅವಶ್ಯಕತೆಯಿರುವಾಗ ನಿದ್ರಿಸುವುದು ಮತ್ತು ನಿದ್ರೆ ಪೂರ್ಣಗೊಂಡಾಗ ಮಾತ್ರ ಎದ್ದೇಳುವುದು ಕೂಡಾ ಅಷ್ಟೇ ಮುಖ್ಯ.

    ಕಣ್ಣೀರು:
    ಖಿನ್ನತೆ ಅಥವಾ ಬೇಸರವುಂಟಾದಾಗ ಭಾವನೆಗಳನ್ನು ನಿಯಂತ್ರಿಸುವುದಕ್ಕಿಂತ ಅತ್ತು ಬಿಡುವುದು ಒಳ್ಳೆಯ ಅಭ್ಯಾಸ. ವ್ಯಕ್ತಪಡಿಸದೆ ಮನಸ್ಸಿನಲ್ಲಿ ಹುದುಗಿಸಿಟ್ಟ ಋಣಾತ್ಮಕ ಭಾವನೆಗಳು ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ.

    ವೀರ್ಯ:
    ಪ್ರೌಢಾವಸ್ಥೆ ತಲುಪಿದ ನಂತರ ವೀರ್ಯದ ಉತ್ಪಾದನೆ ನಿರಂತರವಾಗುವುದರಿಂದ, ಮೇಲೆ ಉಲ್ಲೇಖಿಸಿದ ನಿಯಮ ಇಲ್ಲಿಯೂ ಅನ್ವಯವಾಗುತ್ತದೆ. ಉತ್ತಮ ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಇದು ಸಹಾಯಕವಾಗುತ್ತದೆ.

    ಈ ಪರಿಕಲ್ಪನೆಯ ಪ್ರಾಮುಖ್ಯತೆಯೇನು?
    ದೇಹದ ಆಗುಹೋಗುಗಳು ಒಂದು ನಿರ್ದಿಷ್ಟವಾದ ಲಯಬದ್ಧತೆಯಿಂದ ಕೂಡಿರುತ್ತದೆ. ಆರೋಗ್ಯ ಮತ್ತು ಸ್ವಾಸ್ಥ್ಯದ ನಿರ್ವಹಣೆಗಾಗಿ ದೇಹವು ನಿರ್ದಿಷ್ಟವಾದ ನೈಸರ್ಗಿಕ ಕಾರ್ಯವಿಧಾನಗಳನ್ನು ಹೊಂದಿದೆ. ಉದಾಹರಣೆಗೆ, ಹಸಿದಿರುವಾಗ ಜಠರ ಮತ್ತು ಕರುಳಿನಲ್ಲಿ ಜೀರ್ಣಕಾರಿ ಕಿಣ್ವಗಳು ಬಿಡುಗಡೆಯಾಗುತ್ತವೆ. ಈ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿದರೆ ಬಿಡುಗಡೆಗೊಂಡ ಕಿಣ್ವಗಳು ಜೀರ್ಣಕ್ರಿಯೆಗೆ ಸಹಕರಿಸಿ, ಮತ್ತಷ್ಟು ಕಿಣ್ವ ಬಿಡುಗಡೆಯಾಗದಂತೆ ಮೆದುಳಿಗೆ ಸೂಚನೆ ರವಾನೆಯಾಗುತ್ತದೆ. ಹೀಗೆ ಶರೀರದ ಜೈವಿಕ ಗಡಿಯಾರವು ಸರಾಗವಾಗಿಯೂ, ಸಮಯಕ್ಕನುಗುಣವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಹಸಿವಿಲ್ಲದಿರುವಾಗ ಆಹಾರ ಸೇವನೆ ಮಾಡಿದರೆ ಅದು ಶರೀರದ ಲಯಬದ್ಧತೆಯನ್ನು ಏರುಪೇರಾಗಿಸುತ್ತದೆ. ಅದೇ ರೀತಿ, ಹಸಿದಿರುವಾಗ ಆಹಾರ ಸೇವನೆ ಮಾಡದಿದ್ದರೂ ಲಯಬದ್ಧತೆಯಲ್ಲಿ ವ್ಯತ್ಯಾಸವಾಗುತ್ತದೆ. ಈ ನೈಸರ್ಗಿಕ ಲಯಬದ್ಧತೆಯು “ಸರ್ಕೇಡಿಯನ್ ರಿದಮ್ ” ಎಂದು ಕರೆಯಲ್ಪಡುತ್ತದೆ. ಶಿಸ್ತುಬದ್ಧ ಜೀವನಶೈಲಿಯನ್ನು ಅನುಸರಿಸುವುದರಿಂದ ಈ ಸಮತೋಲನವನ್ನು ಕಾಪಾಡಿಕೊಳ್ಳಬಬಹುದು.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
    ಡಾ.ಜನಾರ್ಧನ ವಿ. ಹೆಬ್ಬಾರ್
    ವ್ಯವಸ್ಥಾಪಕ ನಿರ್ದೇಶಕರು ಮತ್ತು ಹಿರಿಯ ವೈದ್ಯರು,
    ಈಝೀ ಆಯುರ್ವೇದ ಆಸ್ಪತ್ರೆ
    ಮೋರ್ಗನ್ಸ್ ಗೇಟ್, ಮಂಗಳೂರು.
    8867385567

    Share Information
    Advertisement
    Click to comment

    Leave a Reply

    Your email address will not be published. Required fields are marked *