LATEST NEWS
ಲ್ಯಾಂಡಿಂಗ್ ವೇಳೆ ರನ್ ವೇಯಲ್ಲೇ ಪಲ್ಟಿ ಹೊಡೆದ ವಿಮಾನ. ಹಲವರಿಗೆ ಗಾಯ

ಟೊರಂಟೋ: ಲ್ಯಾಂಡಿಂಗ್ ವೇಳೆ ವಿಮಾನವೊಂದು ಪಲ್ಟಿ ಹೊಡೆದ ಪರಿಣಾಮ ಹದಿನೆಂಟು ಮಂದಿ ಗಾಯಗೊಂಡಿರುವ ಘಟನೆ ಕೆನಡಾದ ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಭವಿಸಿದೆ.
ನಾಲ್ವರು ಸಿಬ್ಬಂದಿಗಳು ಸೇರಿ ಒಟ್ಟು ಎಂಬತ್ತು ಮಂದಿ ಪ್ರಯಾಣಿಸುತ್ತಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನ ಯುಎಸ್ ನ ಮಿನ್ನಿಯಾಪೋಲಿಸ್‌ನಿಂದ ಹೊರತು ಟೊರೊಂಟೊದ ಪಿಯರ್ಸನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಬಲವಾಗಿ ಬೀಸಿದ ಗಾಳಿಯ ಹೊಡೆತಕ್ಕೆ ವಿಮಾನ ನಿಯಂತ್ರಣ ಕಳೆದುಕೊಂಡು ಮಂಜಿನ ರಾಶಿಯ ಮೇಲೆ ಪಲ್ಟಿ ಹೊಡೆದಿದೆ ಎಂದು ವಿಮಾನಯಾನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಒಂದು ಮಗು ಸೇರಿದಂತೆ ಹದಿನೆಂಟು ಮಂದಿಗೆ ಗಾಯಗಳಾಗಿದ್ದು ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದು ವಿಮಾನ ಪಲ್ಟಿಯಾಗುತ್ತಿದ್ದಂತೆ ವಿಮಾನ ಸಿಬ್ಬಂದಿಗಳು ಹಾಗೂ ರಕ್ಷಣಾ ತಂಡ ವಿಮಾನದಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿದೆ ಅಲ್ಲದೆ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದೆ.
https://x.com/alesizneias/status/1891593762616316327
ಹವಾಮಾನ ವೈಪರೀತ್ಯ ಬಲವಾದ ಗಾಳಿಯಿಂದ ವಿಮಾನ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದ್ದು ಘಟನೆ ಕುರಿತು ತನಿಖೆ ನಡೆಸುವುದಾಗಿ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.
ಹಿಮಪಾತದಿಂದಾಗಿ ವಿಮಾನ ನಿಲ್ದಾಣದಲ್ಲಿ ಗೋಚರತೆ ಕೂಡ ಕಳಪೆಯಾಗಿತ್ತು. ಇದರಿಂದಾಗಿ ವಿಮಾನ ಲ್ಯಾಂಡಿಂಗ್ ವೇಳೆ ನಿಯಂತ್ರಣ ಕಳೆದುಕೊಂಡು ರನ್ ವೇ ಪಕ್ಕದಲ್ಲಿ ಪಲ್ಟಿಯಾಗಿ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.