KARNATAKA
ಈವೆಂಟ್ ಮ್ಯಾನೇಜ್‌ಮೆಂಟ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಬಂಧನ
ಬೆಂಗಳೂರು: ಈವೆಂಟ್ ಮ್ಯಾನೇಜ್‌ಮೆಂಟ್ ಉದ್ಯಮದ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಯನ್ನು ಸಿಸಿಬಿಯ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ.
ಪಟ್ಟೆಗಾರಪಾಳ್ಯದ ನಿವಾಸಿಗಳಾದ ಪ್ರಕಾಶ್ ಹಾಗೂ ಪಾರಿಜಾತ ದಂಪತಿಯನ್ನು ಬಂಧಿಸಿ, ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ.
‘ರಾಕೇಶ್ ಹಾಗೂ ಪೂಜಾ ಎಂಬ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದ ಆರೋಪಿಗಳು, ಉತ್ತರ ಕರ್ನಾಟಕದ ಭಾಗದ ಬಡ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ನಗರಕ್ಕೆ ಕರೆತಂದು ಉದ್ಯೋಗದ ಭರವಸೆ ನೀಡುತ್ತಿದ್ದರು. ನಂತರ ಅವರಿಗೆ ಕೆಲಸ ಕೊಡಿಸದೇ ಹಣದ ಆಮಿಷವೊಡ್ಡಿ ವೇಶ್ಯಾವಟಿಕೆ ಅಡ್ಡೆಗೆ ದೂಡುತ್ತಿದ್ದರು. ಈವೆಂಟ್ ಮ್ಯಾನೇಜ್‌ಮೆಂಟ್ ಕೆಲಸದ ಸೋಗಿನಲ್ಲಿ ವಾರಕ್ಕೊಮ್ಮೆ ತಮಿಳುನಾಡು, ಪುದುಚೆರಿ ರೆಸಾರ್ಟ್ಗಳಲ್ಲಿ ನಡೆಯುವ ಪಾರ್ಟಿಗಳಿಗೆ ಹೆಣ್ಣುಮಕ್ಕಳನ್ನು ಕರೆದೊಯ್ದು ವೇಶ್ಯಾವಾಟಿಕೆಗೆ ಬಿಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಹೊರ ರಾಜ್ಯದ ಶ್ರೀಮಂತರು, ಉದ್ಯಮಿಗಳು, ರೆಸಾರ್ಟ್ಗಳಿಗೆ ಭೇಟಿ ನೀಡುತ್ತಿದ್ದರು. ಅವರಿಂದ ₹25 ಸಾವಿರದಿಂದ ₹50 ಸಾವಿರದವರೆಗೂ ಹಣ ಪಡೆದು ದಂಧೆ ನಡೆಸುತ್ತಿದ್ದ ಆರೋಪಿಗಳು, ಮದ್ಯ ಸಹ ಪೂರೈಸುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಬೆಂಗಳೂರಿನಿಂದ ಯುವತಿಯರನ್ನು ಕರೆದೊಯ್ಯುತ್ತಿದ್ದ ವೇಳೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಶದಲ್ಲಿದ್ದ ನಾಲ್ವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.