LATEST NEWS
ಕಾಡು ಜನರಿಗೆ ಪೂರ್ತಿ ಬಟ್ಟೆ ಹಾಕಲು ಇಲ್ಲವೆಂದು ಅವಹೇಳನ ಮಾಡಿದ ಪ್ರಮೋದ್ ಮುತಾಲಿಕ್ ವಿರುದ್ಧ ಹೆಬ್ರಿ ಠಾಣೆಯಲ್ಲಿ ದೂರು ದಾಖಲು
ಕಾರ್ಕಳ, ಎಪ್ರಿಲ್ 29: ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಶ್ರೀರಾಮ ಸೇನೆಯ ರಾಷ್ಟ್ರೀಯ ಸರ್ವೋಚ್ಛ ನಾಯಕ ಪ್ರಮೋದ್ ಮುತಾಲಿಕ್ ಹಾಗೂ ಶ್ರೀ ರಾಮ ಸೇನೆಯ ಹಲವು ಮುಖಂಡ ವಿರುದ್ಧ ಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಏಪ್ರಿಲ್ 8 ರಂದು ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಕಬ್ಬಿನಾಲೆ ಭಾಗದ ಜನಾಂಗದವರು ಕಾಡು ಜನರು ಪೂರ್ತಿಯಾಗಿ ಹಾಕಿಕೊಳ್ಳಲಿಕ್ಕೆ ಬಟ್ಟೆ ಇಲ್ಲವೆಂದು ದಲಿತ ಸಮಾಜವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಗೋಪಾಲ ಗೌಡ ಎಂಬವರು ಮುತಾಲಿಕ್ ಹಾಗೂ ಇತರರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ಪ್ರತಿರೋಧ ಕಾಯ್ದೆಯನ್ವಯ, ದಲಿತ ಜನಾಂಗದವರಿಗೆ ಅವಹೇಳನಕಾರಿಯಾಗಿ ಮಾತನಾಡಿದ ಪ್ರಮೋದ್ ಮುತಾಲಿಕ್ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ ಹರೀಶ್ ಅಧಿಕಾರಿ, ವಿವೇಕಾನಂದ ಶೆಣೈ, ಪ್ರವೀಣ್ ಪೂಜಾರಿ, ಪೂಜಾರಿ, ದಿವ್ಯ ನಾಯಕ್, ಸುಭಾಷ್ ಚಂದ್ರ ಹೆಗ್ಡೆಯವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಗೋಪಾಲ ಗೌಡ ದೂರು ನೀಡಿದ್ದಾರೆ.
ಚುನಾವಣೆ ಅಂತಿಮ ಹಂತಕ್ಕೆ ತಲುಪಿದ್ದು, ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ. ಈ ನಡುವೆ ಅಭ್ಯರ್ಥಿ ಹಾಗೂ ಇತರ ಮುಖಂಡ ವಿರುದ್ಧ ದಾಖಲಾಗಿರುವ ಪ್ರಕರಣವು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸಗೆ ಗ್ರಾಸವಾಗಿದೆ.