LATEST NEWS
ಜಮ್ಮು & ಕಾಶ್ಮೀರದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್, 38 ಮಂದಿ ಮೃತ್ಯು..!
ಜಮ್ಮು : ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭೀಕರ ಬಸ್ ದುರಂತ ಸಂಭವಿಸಿದ್ದು 38 ಮಂದಿ ಸಾವನ್ನಪ್ಪಿದರೆ, 19 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.
ಕಿಶ್ತ್‌ವಾರ್‌ನಿಂದ ಜಮ್ಮುವಿಗೆ ಸಾಗುತ್ತಿದ್ದ ಬಸ್ ಅಸ್ಸಾರ್ ಎಂಬ ಪ್ರದೇಶದಲ್ಲಿ ಅಪಘಾತಕ್ಕಿಡಾಗಿದ್ದು ಬರೋಬ್ಬರಿ 200 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ.
ಅಪಘಾತಕ್ಕೆ ತುತ್ತಾದ ಬಸ್‌ನಲ್ಲಿ 55 ಮಂದಿ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸ್ಥಳೀಯ ಆಡಳಿತ, ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಈಗಾಗಲೇ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ದೋಡಾ ಜಿಲ್ಲೆಯ ಎಸ್‌ಎಸ್‌ಪಿ ಅಬ್ದುಲ್ ಖಯ್ಯೂಮ್ ಅವರು ಈ ಕುರಿತಾಗಿ ಅಧಿಕೃತ ಮಾಹಿತಿ ನೀಡಿದ್ದು, 38 ಮಂದಿ ಸಾವನ್ನಪ್ಪಿದ್ದಾರೆ ಎಂದು ಖಚಿತ ಮಾಹಿತಿ ನೀಡಿದ್ಧಾರೆ.ಈ ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಇದೆ. ಪ್ರಾಥಮಿಕ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಲಾಗಿದ್ದು, ಗಂಭೀರ ಪರಿಸ್ಥಿತಿ ಇರುವ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ರವಾನೆ ಮಾಡಲಾಗಿದೆ. ಈ ಕುರಿತಾಗಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರೂ ಕೂಡಾ ಟ್ವೀಟ್ (ಎಕ್ಸ್) ಮಾಡಿದ್ದು, ಅಪಘಾತದ ಕುರಿತಾಗಿ ವಿವರ ನೀಡಿದ್ದಾರೆ. ಆರಂಭದಲ್ಲಿ ಈ ಅಪಘಾತದಲ್ಲಿ 5 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ನಂತರ ಮೃತರ ಸಂಖ್ಯೆ 36ಕ್ಕೆ ಏರಿಕೆ ಆಗಿತ್ತು. ಇದೀಗ 38 ಮಂದಿ ಮೃತಪಟ್ಟಿರುವ ಕುರಿತಾಗಿ ಪೊಲೀಸರು ಹೇಳಿದ್ಧಾರೆ.ಗಾಯಾಳುಗಳ ತ್ವರಿತ ರವಾನೆಗೆ ಹೆಲಿಕಾಪ್ಟರ್ ಮೂಲಕವೂ ಕಾರ್ಯಾಚರಣೆ ನಡೆಯುತ್ತಿದೆ.