LATEST NEWS
20 ರೂ ನೀರಿನ ಬಾಟಲ್ ಗಾಗಿ ಬರೋಬ್ಬರಿ 5 ವರ್ಷದ ಹೋರಾಟ, ಸಿಕ್ಕಿದ ಪರಿಹಾರವೇಷ್ಟು ಗೋತ್ತಾ?
ಅಹಮದಾಬಾದ್, ಜನವರಿ 18 : ಕೋರ್ಟು ಕೇಸು ಅಂದ್ರೆ ಸಹವಾಸ ಬೇಡಪ್ಪ ಅಂತ ಹೋಗೋರೆ ಜಾಸ್ತಿ, ಅಂತದ್ರಲ್ಲಿ ಕೇವಲ 20/- ನೀರಿನ ಬಾಟಲ್ ಗಾಗಿ ಬರೋಬ್ಬರಿ 5 ವರ್ಷ ಹೋರಾಡಿದ್ದಾರೆ ಈ ವ್ಯಕ್ತಿ. ಹೌದು ಕೆಲವು ಸಾರ್ವಜನಿಕ ಪ್ರದೇಶಗಳು, ಮಾಲ್ಗಳು ಮತ್ತು ಚಿತ್ರಮಂದಿರಗಳಲ್ಲಿ ಕೆಲ ಆಹಾರ ಪದಾರ್ಥಗಳ ಬೆಲೆ ನೋಡಿದರೆ ನಮಗೆ ಅಚ್ಚರಿಯಾಗುವುದು ಖಂಡಿತ. ಹೊರಗಡೆ ಪಾಪ್ಕಾರ್ನ್ ಕೇವಲ 10 ರೂಪಾಯಿಗೆ ಸಿಕ್ಕರೆ, ಅದೇ ಪಾಪ್ಕಾರ್ನ್ 15 ರಿಂದ 150 ರೂ. ವರೆಗೆ ಚಿತ್ರಮಂದಿರಗಳಲ್ಲಿ ಚಾರ್ಜ್ ಮಾಡುತ್ತಾರೆ.
ನಮ್ಮ ಹವ್ಯಾಸಗಳನ್ನೇ ಲಾಭವಾಗಿ ಮಾಡಿಕೊಳ್ಳುವ ಅನೇಕ ಜನರಿರುವುದನ್ನು ನಾವು ನೋಡಿದ್ದೇವೆ. ಅದರಂತೆಯೇ ಅಹಮದಾಬಾದ್ನ ರೋಹಿತ್ ಪಾಟಿಲ್ (67) ಅವರು ಇದೇ ರೀತಿಯ ಅನುಭವವನ್ನು ಎದುರಿಸಿ ಐದು ವರ್ಷಗಳ ಬಳಿಕ ಗೆಲವು ಸಾಧಿಸಿದ್ದಾರೆ. ಐದು ವರ್ಷಗಳ ಹಿಂದೆ ರೆಸ್ಟೋರೆಂಟ್ ಒಂದು 20 ರೂ. ಬೆಲೆಯ ನೀರಿನ ಬಾಟಲ್ಗೆ 150 ರೂ. ಚಾರ್ಜ್ ಮಾಡಿದ್ದರು. ಇದರ ವಿರುದ್ಧ ಕೊರ್ಟ್ ಮೆಟ್ಟಿಲೇರಿದ್ದ ರೋಹಿತ್ ಐದು ವರ್ಷಗಳ ಬಳಿಕ ಗೆಲುವು ಕಂಡಿದ್ದಾರೆ.
ಅಹಮದಾಬಾದ್ನ ಎಸ್ಜಿ ಹೆದ್ದಾರಿಯಲ್ಲಿರುವ ಹೋಟೆಲ್ಗೆ ರೋಹಿತ್ ಅವರು ತಮ್ಮ ಸ್ನೇಹಿತರೊಂದಿಗೆ ಐದು ವರ್ಷಗಳ ಹಿಂದೆ ತೆರಳಿದ್ದರು. ನೆಚ್ಚಿನ ಆಹಾರಗಳ ಜತೆ ನೀರಿನ ಬಾಟಲ್ ಅನ್ನು ಆರ್ಡರ್ ಮಾಡಿದ್ದರು. ಊಟದ ಬಳಿಕ ಬಿಲ್ ನೋಡಿದ ರೋಹಿತ್ ಅವರಿಗೆ ಶಾಕ್ ಎದುರಾಗಿತ್ತು. ನೀರಿನ ಬಾಟಲ್ಗೆ ಬರೋಬ್ಬರಿ 164 ರೂಪಾಯಿ ಬಿಲ್ ಮಾಡಲಾಗಿತ್ತು. ತಪ್ಪಾಗಿ ನಮೂದಿಸಿರಬಹುದು ಎಂದು ವಿಚಾರಿಸಿದಾಗ, ಇಲ್ಲ ಬಾಟಲ್ ಬೆಲೆ ಅಷ್ಟೇ ಎಂದು ಹೇಳಿದ್ದರು. ಬಳಿಕ ಮಾಲೀಕನ ಜತೆ ಸಾಕಷ್ಟು ವಾಗ್ವಾದ ಮಾಡಿದರು ಪ್ರಯೋಜನವಾಗದೆ ಕೊನೆಗೆ ಬಿಲ್ ಪಾವತಿಸಿ ಮರಳಿದ್ದರು. ಆದರೆ, ಅಷ್ಟಕ್ಕೆ ಸುಮ್ಮನಾಗದ ರೋಹಿತ್ ಅವರು ಗ್ರಾಹಕರ ಕೋರ್ಟ್ಗೆ ಹೋಟೆಲ್ ಕ್ರಮವನ್ನು ಪ್ರಶ್ನಿಸಿ ದಾವೆ ಹೂಡಿದ್ದರು.
ಬಳಿಕ ಕೋರ್ಟ್ ಹೋಟೆಲ್ಗೆ ಲೀಗಲ್ ನೋಟಿಸ್ ಕಳುಹಿಸಿ ಪ್ರಕರಣ ಕುರಿತು ತಮ್ಮನ್ನು ಸಮರ್ಥಿಸಿಕೊಳ್ಳಲು ವಕೀಲರನ್ನು ಕಳುಹಿಸಲು ಸೂಚಿಸಿತ್ತು. ಇಬ್ಬರ ವಾದವನ್ನು ಆಲಿಸಿದ ಬಳಿಕ ನ್ಯಾಯಾಲಯ ಐದು ವರ್ಷಗಳ ಕಾಲ ಮುಂದೂಡಿತ್ತು. ರೋಹಿತ್ ಸುಮಾರು 28 ಬಾರಿ ಕೋರ್ಟ್ಗೆ ಹಾಜರಾಗಿದ್ದರು.
ಒಂದು ಬಾಟಲಿ ನೀರಿಗಾಗಿ ಐದು ವರ್ಷಗಳ ಹೋರಾಟ ವ್ಯರ್ಥವಾಯಿತು ಎಂದು ಎಂದಿಗೂ ರೋಹಿತ್ ಅವರು ಯೋಚಿಸಲಿಲ್ಲವಂತೆ. ತಾಳ್ಮೆಯಿಂದಲೇ ಪ್ರತಿ ಬಾರಿ ನ್ಯಾಯಾಲಯಕ್ಕೆ ಬಂದು ವಿಚಾರಣೆ ಎದುರಿಸುತ್ತಿದ್ದರು. ಈ ತಿಂಗಳ 5ರಂದು ನ್ಯಾಯಾಲಯ ರೋಹಿತ್ ಪರವಾಗಿ ತೀರ್ಪು ಪ್ರಕಟಿಸಿದೆ. ನ್ಯಾಯಾಲಯ 5,500 ರೂ. ಪರಿಹಾರ ನೀಡುವಂತೆ ಹೋಟೆಲ್ಗೆ ಆದೇಶಿಸಿದೆ.
ಈ ಬಗ್ಗೆ ಮಾತನಾಡಿರುವ ರೋಹಿತ್, ಕೋರ್ಟ್ ತೀರ್ಪಿನ ಬಗ್ಗೆ ಸಮಾಧಾನವಿದೆ. ಇದೇ ನನ್ನ ಮೊದಲ ಪ್ರಕರಣವಲ್ಲ. ಈಗಾಗಲೇ ಅನೇಕ ಪ್ರಕರಣಗಳನ್ನು ದಾಖಲಿಸಿದ್ದೇನೆ. ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯಲು ಯಾವ ಕಂಪನಿಗೂ ಹಕ್ಕಿಲ್ಲ ಎಂದಿರುವ ರೋಹಿತ್, ಗ್ರಾಹಕರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಬೇಕು. ಅದರನ್ನು ದರೋಡೆ ಮಾಡಬಾರದು. ಇದನ್ನು ಸಹಿಸಲು ಆಗುವುದಿಲ್ಲ ಎಂದಿದ್ದಾರೆ.