LATEST NEWS
ಅನುಮತಿ ಇಲ್ಲದೆ ಡ್ರೋನ್ ಬಳಸಿದರೆ ಕಠಿಣ ಕ್ರಮ – ಪೊಲೀಸ್ ಆಯುಕ್ತರ ಎಚ್ಚರಿಕೆ
ಮಂಗಳೂರು ಜನವರಿ 18: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಯುವ ಮದುವೆ, ಖಾಸಗಿ ಕಾರ್ಯಕ್ರಮ ಹಾಗೂ ಪ್ರತಿಭಟನೆಗಳಲ್ಲಿ ಯಾವುದೇ ಪರವಾನಗಿ ಪಡೆಯದೇ ಡ್ರೋನ್ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, ನಿಯಮ ಉಲ್ಲಂಘಿಸಿ ಡ್ರೋನ್ ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಎಚ್ಚರಿಸಿದ್ದಾರೆ.
ಇತ್ತಿಚೆಗೆ ಎಸ್ ಡಿಪಿಐ ಸಂಘಟನೆಯ ಎಸ್ ಪಿ ಕಚೇರಿ ಚಲೋ ಪ್ರತಿಭಟನೆಯಲ್ಲಿ ಡ್ರೋನ್ ಬಳಸಿ ಚಿತ್ರಿಕರಣ ಮಾಡಲಾಗಿತ್ತು, ಯಾವುದೇ ಅನುಮತಿ ಇಲ್ಲದೆ ಡ್ರೋನ್ ಬಳಕೆ ಮಾಡಿದ್ದಕ್ಕೆ ಪೊಲೀಸರು ಡ್ರೋನ್ ಗಳನ್ನು ವಶಕ್ಕೆ ಪಡೆದಿದ್ದರು. ಈ ಹಿನ್ನಲೆ ಈ ಕುರಿತಂತೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಶಶಿಕುಮಾರ್ ನಗರದಲ್ಲಿ ನಡೆಯುವ ಪ್ರತಿಭಟನೆಯಲ್ಲಿ, ಖಾಸಗಿ ಕಾರ್ಯಕ್ರಮ, ಮದುವೆ ಕಾರ್ಯಕ್ರಮ, ಗಣ್ಯರ ಕಾರ್ಯಕ್ರಮದಲ್ಲಿ ಡ್ರೋನ್ ಬಳಕೆ ಮಾಡಲಾಗುತ್ತಿರುವುದು ಗಮನಕ್ಕೆ ಬಂದಿದೆ. ಡಿಜಿಸಿಎ ಮಾರ್ಗದರ್ಶನದಂತೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ಡ್ರೋನ್ ಬಳಕೆ ಮಾಡಬೇಕು ಎಂದರು. ಡ್ರೋನ್ ಮಾಲೀಕರು ಮತ್ತು ಅದನ್ನು ಬಳಸಲು ಸೂಚಿಸುವವರು ಸೂಕ್ತ ಅನುಮತಿ ಪಡೆಯದೆ ಬಳಸಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.