ಮಹಾಮಸ್ತಕಾಭಿಷೇಕಕ್ಕೆ ಸಂಭ್ರಮದ ಸಿದ್ದತೆ – ಡಾ. ಡಿ ವಿರೇಂದ್ರ ಹೆಗಡೆ

ಧರ್ಮಸ್ಥಳ ಜನವರಿ 2: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದ ರತ್ನಗಿರಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ತ್ಯಾಗ, ತಪಸ್ಸು, ಮೋಕ್ಷದ ಸಾಕಾರ ಮೂರ್ತಿಯಾದ ಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕದ ಸಂಭ್ರಮಕ್ಕೆ ಸಿದ್ಧತೆ ನಡೆದಿದೆ. ಫೆಬ್ರವರಿ 9 ರಿಂದ 18 ರ ವರೆಗೆ ಜೈನ ವಿಧಿ ವಿಧಾನಗಳ ಮೂಲಕ ಈ ಮಸ್ತಾಭಿಷೇಕ ನಡೆಯಲಿದ್ದು, ದೇಶ-ವಿದೇಶಗಳಿಂದ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಈ ಸಂಭ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಧರ್ಮಸ್ಥಳದ ರತ್ನಗಿರಿ ಬೆಟ್ಟದ ತುದಿಯಲ್ಲಿ ವಿರಾಜಮಾನನಾದ ತ್ಯಾಗ ಮೂರ್ತಿ ಮೂರ್ತಿ ಬಾಹುಬಲಿ ಮತ್ತೆ ಮಹಾಮಸ್ತಕಾಭಿಷೇಕದ ಸಂಭ್ರಮ. ಪ್ರತಿ 12 ವರ್ಷಗಳಿಗೊಮ್ಮೆ ಈ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು, 2019 ರ ಫೆಬ್ರವರಿ 9 ರಿಂದ 18 ರ ವರೆಗೆ ಚತುರ್ಥ ಮಸ್ತಕಾಭಿಷೇಕ ನಡೆಯಲಿದೆ. 108 ಆಚಾರ್ಯ ವರ್ಧಮಾನ ಸಾಗರ್ ಜೀ ಮಹಾರಾಜ್ ಮತ್ತು 108 ಆಚಾರ್ಯ ಪುಷ್ಪದಂತ ಸಾಗರ್ ಜೀ ಮಹಾರಾಜ್ಯ, ಶ್ರವಣ ಬೆಳಗೊಳದ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾಕರ ಮಹಾಸ್ವಾಮಿ, ಕಾರ್ಕಳ ದಾನಶಾಲಾ ಮಠದ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ನೇತೃತ್ವದಲ್ಲಿ ಸುಮಾರು 300 ಕ್ಕೂ ಮಿಕ್ಕಿದ ಮುನಿಗಳು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಧಾರ್ಮಿಕ ವಿದಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಾಹುಬಲಿಯ ಬದುಕಿನ ಘಟ್ಟಗಳ ಕುರಿತ ಘಟನಾವಳಿಗಳ ರೂಪಕವನ್ನೂ ಮಸ್ತಕಾಭಿಷೇಕದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ.

ಧರ್ಮಸ್ಥಳದ ರತ್ನಗಿರಿಯಲ್ಲಿ ವಿರಾಜಮಾನವಾಗಿರುವ ಬಾಹುಬಲಿಗೆ ಇದು ನಾಲ್ಕನೇ ಮಹಾಮಸ್ತಕಾಭಿಷೇಕವಾಗಿದ್ದು, ಈ ನಿಟ್ಟಿನಲ್ಲಿ ರತ್ನಗಿರಿಯಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಕಲಶಾಭಿಷೇಕಕ್ಕೆ ಅನುಕೂಲವಾಗುವಂತಹ ಅಟ್ಟಣಿಗೆಯ ನಿರ್ಮಾಣ ಕಾಮಗಾರಿಯೂ ಆರಂಭಗೊಂಡಿದೆ. ಮಹಾಮಸ್ತಕಾಭಿಷೇಕದ ವೈಭವವನ್ನು ಎಲ್ಲಾ ಭಕ್ತರೂ ನೋಡುವ ಉದ್ಧೇಶದಿಂದ ಭಕ್ತಾಧಿಗಳು ಕುಳಿತುಕೊಳ್ಳಲು ಗ್ಯಾಲರಿಗಳ ನಿರ್ಮಾಣ ಕಾರ್ಯವೂ ಪ್ರಾರಂಭವಾಗಿದ್ದು, ಭಕ್ತಾಧಿಗಳು ಈ ವೈಭವವನ್ನು ಕಣ್ತುಂಬುವ ತವಕದಲ್ಲಿದ್ದಾರೆ.

ಮಸ್ತಕಾಭಿಷೇಕದ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳನ್ನೂ ಧರ್ಮಸ್ಥಳ ಜೋಡಿಸಿಕೊಂಡು ಬರುತ್ತಿದೆ. ಈ ವರ್ಷ ನೀರಾವರಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಇರುವ 100 ಕೆರೆಗಳನ್ನು ಕ್ಷೇತ್ರದ ವತಿಯಿಂದ ಪುನರುಜ್ಜೀವನ ಮಾಡುವ ಯೋಜನೆ ಹಾಗೂ ರಾಜ್ಯದ 300 ಹಾಲು ಸೊಸೈಟಿಗಳಿಗೆ ಹಣಕಾಸಿನ ಅನುದಾನವನ್ನೂ ನೀಡಲು ಯೋಜನೆ ರೂಪಿಸಲಾಗಿದೆ.