LATEST NEWS
2550 ವಿದೇಶಿ ತಬ್ಲಿಘಿಗಳಿಗೆ ಇನ್ನು ಹತ್ತು ವರ್ಷ ದೇಶಕ್ಕೆ ಬರದಂತೆ ತಡೆ

ಲಾಕ್ ಡೌನ್ ಸಮಯದಲ್ಲಿ ದೇಶದಲ್ಲಿ ಅಡಗಿಕೊಂಡಿದ್ದ 2550 ವಿದೇಶಿ ತಬ್ಲಿಘಿ ಸದಸ್ಯರು
ನವದೆಹಲಿ, ಜೂನ್ 4, ಲಾಕ್ ಡೌನ್ ಸಮಯದಲ್ಲಿ ದೇಶದಲ್ಲಿ ಅಡಗಿಕೊಂಡಿದ್ದ 2550 ವಿದೇಶಿ ತಬ್ಲಿಘಿ ಸದಸ್ಯರಿಗೆ ಇನ್ನು ಹತ್ತು ವರ್ಷಗಳ ಕಾಲ ಭಾರತ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಲಾಕ್ ಡೌನ್ ಘೋಷಣೆಯಾದ ಬಳಿಕ ದೇಶದ ವಿವಿಧೆಡೆ ಮಸೀದಿ ಮತ್ತು ಇನ್ನಿತರ ಪ್ರಾರ್ಥನಾ ಕೇಂದ್ರಗಳಲ್ಲಿ ವಿದೇಶಿ ಮೂಲದ ಸಾವಿರಾರು ಮಂದಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ತಮ್ಮ ವೀಸಾ ಅವಧಿ ಮುಗಿದರೂ, ದೇಶದಲ್ಲಿ ಉಳಿದುಕೊಂಡಿದ್ದಕ್ಕೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಪೈಕಿ ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿತ್ತು.
ಹೀಗೆ ವಿವಿಧ ರಾಜ್ಯಗಳು ಪಟ್ಟಿ ಮಾಡಿ ನೀಡಿರುವ 2550 ತಬ್ಲಿಘಿ ಸದಸ್ಯರನ್ನು ಕಪ್ಪು ಪಟ್ಟಿಗೆ ಸೇರಿಸಿರುವ ಕೇಂದ್ರ ಗೃಹ ಸಚಿವಾಲಯ ಮುಂದಿನ ಹತ್ತು ವರ್ಷಗಳ ಕಾಲ ಇವರು ಭಾರತಕ್ಕೆ ಕಾಲಿಡದಂತೆ ನಿಷೇಧ ಹಾಕಿದೆ.

ಬೆಂಗಳೂರಿನ ಪಾದರಾಯನಪುರ ಸೇರಿದಂತೆ ತಮಿಳ್ನಾಡು, ಮಹಾರಾಷ್ಟ್ರದ ಮುಂಬೈನಲ್ಲಿ ಹಲವಾರು ತಬ್ಲಿಘಿ ಸದಸ್ಯರು ಮಸೀದಿಗಳಲ್ಲಿ ಅಡಗಿಕೊಂಡಿದ್ದನ್ನು ಪೊಲೀಸರು ಪತ್ತೆ ಮಾಡಿದ್ದರು. ವಿಯೆಟ್ನಾಂ, ಅಫ್ಘಾನ್, ಒಮಾನ್ ಹೀಗೆ ಹಲವು ರಾಷ್ಟ್ರಗಳ ಮೂಲದ ತಬ್ಲಿಘಿ ಸದಸ್ಯರು ಪೊಲೀಸರಿಗೆ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದರು.
ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾದ ಮಾರ್ಚ್ 25 ರ ಬಳಿಕವೂ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ 2500ಕ್ಕೂ ಹೆಚ್ಚು ಮಂದಿ ಉಳಿದುಕೊಂಡಿದ್ದು ಪತ್ತೆಯಾಗಿತ್ತು. ತಬ್ಲಿಘಿ ಸಮಾವೇಶ ಪ್ರಕರಣ ಆನಂತ್ರ ದೇಶಾದ್ಯಂತ ಸಂಚಲನಕ್ಕೂ ಕಾರಣವಾಗಿತ್ತು.