Connect with us

DAKSHINA KANNADA

ವಿಶ್ವಪರಿಸರದ ದಿನವೇ ಮರಗಳಿಗೆ ಕೊಡಲಿ ಹಾಕಿ ಗಿಡ ನೆಡುವ ಕಾರ್ಯಕ್ರಮ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಘಟನೆ

ಪುತ್ತೂರು ಜೂನ್ 05: ವಿಶ್ವ ಪರಿಸರದ ದಿನವೇ ಮರಗಳಿಗೆ ಕೊಡಲಿ ಹಾಕಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ತಾಲೂಕು ಪಂಚಾಯತ್ ನೇತೃತ್ವದಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪುತ್ತೂರು ಶಾಸಕ ಸಂಜೀವ ಮಠಂದೂರು ಗಿಡ ನೆಡುವ ಮೂಲಕ ಈ‌ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮವೂ ನಿಗದಿಯಾಗಿತ್ತು. ಆದರೆ ಕಾರ್ಯಕ್ರಮ ಆರಂಭಕ್ಕೆ ಮೊದಲೇ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿರುವ ಬಿದಿರಿನ ಮರಗಳನ್ನು ಕಡಿದು ಹಾಕಲಾಗಿದೆ.

ಸುಮಾರು ಹತ್ತಕ್ಕೂ ಮಿಕ್ಕಿದ ಬಿದಿರಿನ ಕೋಲುಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳ‌ ಸಮ್ಮುಖದಲ್ಲೇ ಕಡಿಯಲಾಗಿದೆ. ಇಂದಿನ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನೆಡಲಾಗುವ ಗಿಡಕ್ಕೆ ಸ್ಥಳಾವಕಾಶ ಕಲ್ಪಿಸುವುದಕ್ಕೋಸ್ಕರ ಈ ಬಿದಿರಿನ ಕೋಲುಗಳನ್ನು ಕಡಿಯಲಾಗಿದೆ ಎನ್ನುವ ಸಮಜಾಯಿಷಿಯನ್ನೂ ಕಾರ್ಯಕ್ರಮದ ಆಯೋಜಕರು ನೀಡಿದ್ದಾರೆ.


ಒಂದು ಕಡೆಯಲ್ಲಿ ಪರಿಸರ ದಿನಾಚರಣೆ ಆಚರಿಸಿ, ಅಲ್ಲೇ ಪಕ್ಕದಲ್ಲಿ ಪರಿಸರ ನಾಶ ಮಾಡುವುದಾದರೆ ಕಾರ್ಯಕ್ರಮದ ಆಯೋಜನೆಯ ಔಚಿತ್ಯವಾದರೂ ಏನು ಎನ್ನುವ ಪ್ರಶ್ನೆಗಳು ಮೂಡಲಾರಂಭಿಸಿದೆ.
ಕೇವಲ‌ ಕಾಟಾಚಾರಕ್ಕೆ, ಭಾಷಣ, ಸನ್ಮಾನಗಳಿಗೆ ಸೀಮಿತವಾಗಿ ಪರಿಸರ ಉಳಿಸುವಂತಹ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸುವವರ ಈ ಬಗ್ಗೆ ಮರು ವಿಮರ್ಶೆ ಮಾಡಬೇಕಿದೆ.

 

Facebook Comments

comments