LATEST NEWS
ದಕ್ಷಿಣಕನ್ನಡ ಜಿಲ್ಲೆಯ 18 ಗ್ರಾಮ ಸೀಲ್ ಡೌನ್

ಮಂಗಳೂರು ಜೂನ್ 14: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ನಿಯಂತ್ರಣಕ್ಕೆ ಜಿಲ್ಲಾಡಳಿತ 50ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣ ಇರುವ 18 ಗ್ರಾಮಪಂಚಾಯತ್ ಗಳನ್ನು ಇಂದಿನಿಂದ ಜೂನ್ 21ರವರೆಗೆ ಸೀಲ್‌ಡೌನ್ ಮಾಡಿದೆ.
ಈಗಾಗಲೇ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆ ಇದ್ದ ಜಿಲ್ಲೆಗಳಿಗೆ ಲಾಕ್ ಡೌನ್ ವಿನಾಯಿತಿ ಸಿಕ್ಕಿದ್ದು, ಈ ಹಿನ್ನಲೆ ಜಿಲ್ಲೆಯಲ್ಲೂ ಪಾಸಿಟಿವಿಟಿ ದರ ಕಡಿಮೆ ಮಾಡುವ ಉದ್ದೇಶದಿಂದ 50ಕ್ಕಿಂತ ಹೆಚ್ಚು ಪ್ರಕರಣಗಳಿರುವ ಗ್ರಾಮಗಳನ್ನು ಸೀಲ್‌ಡೌನ್ ಮಾಡಲು ನಿರ್ಧರಿಸಲಾಗಿತ್ತು. ಯಾವೆಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕೋವಿಡ್ ಹೆಚ್ಚಿದೆ ಎಂಬ ಬಗ್ಗೆ ಗ್ರಾಪಂ ಟಾಸ್ಕ್‌ಫೋರ್ಸ್‌ಗಳು ಜಿಲ್ಲಾಧಿಕಾರಿಗೆ ನೀಡಿರುವ ಪ್ರಸ್ತಾವದಂತೆ ಈ ಸೀಲ್‌ಡೌನ್ ಘೋಷಣೆ ಮಾಡಲಾಗಿದೆ

ಇಂದಿನಿಂದ ಜೂನ್ 21ರ ಬೆಳಗ್ಗೆ 9 ಗಂಟೆವರೆಗೆ 7 ದಿನಗಳ ಕಾಲ ಸೀಲ್‌ಡೌನ್ ಇರಲಿದೆ. ಈ ಸಂದರ್ಭ ಗ್ರಾಮಕ್ಕೆ ಪ್ರವೇಶ ಹಾಗೂ ಗ್ರಾಮದಿಂದ ಹೊರ ಹೊಗುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ನರ್ಸಿಂಗ್ ಹೋಂ, ಕ್ಲಿನಿಕ್, ಲ್ಯಾಬ್, ಟೆಲಿಮೆಡಿಸಿನ್, ರಕ್ತ ಸಂಗ್ರಹ ಕೇಂದ್ರ ತೆರೆಯಲು ಅವಕಾಶ ನೀಡಲಾಗಿದೆ. ಕೆಎಂಎಫ್ ಹಾಲಿನ ಬೂತ್, ರಾಜ್ಯ, ರಾಷ್ಟ್ರ ಹೆದ್ದಾರಿ ಪೆಟ್ರೋಲ್ ಬಂಕ್ ತೆರೆಯಲು ಅವಕಾಶ ಕೊಡಲಾಗಿದೆ. ವೈದ್ಯಕೀಯ, ಇತರ ತುರ್ತು ಅಗತ್ಯ ಸೇವೆಗೆ ವಾಹನ ಓಡಾಟಕ್ಕೆ ಅನುಮತಿಸಲಾಗಿದೆ. ಗ್ರಾಮಸ್ಥರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಗ್ರಾಮಪಡೆಗಳು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.