LATEST NEWS
ಸೌದಿ ಅರೇಬಿಯಾನಿಂದ ಮಂಗಳೂರಿಗೆ ಬಂತು ಖಾಸಗಿ ಫ್ಲೈಟ್, 175 ಕನ್ನಡಿಗರು ತಾಯ್ನಾಡಿಗೆ
175 ಕನ್ನಡಿಗರನ್ನು ಸ್ವಂತ ಕರ್ಚಿನಲ್ಲಿ ತಾಯ್ನಾಡಿಗೆ ಕರೆ ತಂದ ಅಲ್ತಾಫ್ ಉಳ್ಳಾಲ್
ಮಂಗಳೂರು, ಜೂನ್ 10, ಸೌದಿ ಅರೇಬಿಯದ ದಮಾಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿನ್ನೆ ತಡರಾತ್ರಿ ಖಾಸಗಿ ವಿಮಾನ ಆಗಮಿಸಿದ್ದು 175 ಕನ್ನಡಿಗರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೊತ್ತು ತಂದಿದೆ.
ಮಂಗಳೂರು ಮೂಲದ ದುಬೈ ಉದ್ಯಮಿಗಳಾದ ಅಲ್ತಾಫ್ ಉಳ್ಳಾಲ್ ಮತ್ತು ಬಶೀರ್ ಸಾಗರ್ ಖಾಸಗಿ ವಿಮಾನ ಬುಕ್ ಮಾಡಿದ್ದಲ್ಲದೆ, ಪ್ರಯಾಣಿಕರ ಕ್ವಾರಂಟೈನ್ ವೆಚ್ಚವನ್ನೂ ಭರಿಸಿದ್ದಾರೆ. ಭಾರತಕ್ಕೆ ಮರಳಲು 500ಕ್ಕಿಂತಲೂ ಹೆಚ್ಚು ಮಂದಿಯ ಅರ್ಜಿಗಳು ಬಂದಿದ್ದವು. ಗರ್ಭಿಣಿ ಮಹಿಳೆಯರು, ತುರ್ತು ವೈದ್ಯಕೀಯ ಸೇವೆ ಅಗತ್ಯವುಳ್ಳವರು, ವಿಸಿಟಿಂಗ್ ವೀಸಾದಲ್ಲಿ ತೆರಳಿದ್ದ ಹಿರಿಯ ನಾಗರಿಕರು ಹೀಗೆ ತುರ್ತು ಪ್ರಯಾಣದ ಅಗತ್ಯ ಆಧಾರದಲ್ಲಿ 175 ಮಂದಿಗಷ್ಟೇ ಅವಕಾಶ ನೀಡಲಾಗಿತ್ತು ಎಂದು ಕಂಪನಿ ಮಾಹಿತಿ ನೀಡಿದೆ.
ತಡರಾತ್ರಿ 1.15ಕ್ಕೆ ವಿಮಾನ ಲ್ಯಾಂಡ್ ಆಗಿದ್ದು 55 ಗರ್ಭಿಣಿಯರು, 20 ಮಂದಿ ವೈದ್ಯಕೀಯ ಅಗತ್ಯ ಇದ್ದವರು, 61 ಹಿರಿಯ ನಾಗರಿಕರು, 35 ಮಕ್ಕಳು, ಸಂಬಂಧಿಕರ ಸಾವಿನ ಹಿನ್ನೆಲೆ ತಾಯ್ನಾಡಿಗೆ ಮರಳಬೇಕಿದ್ದ ನಾಲ್ಕು ಮಂದಿ ವಿಮಾನದಲ್ಲಿದ್ದರು.
SAQCO ಎನ್ನುವ ಕಂಟ್ರಾಕ್ಟ್ ಕಂಪೆನಿಯ ಡೈರೆಕ್ಟರ್ ಆಗಿರುವ ಅಲ್ತಾಫ್ ಉಳ್ಳಾಲ್ ಮತ್ತು ಬಶೀರ್ ಸಾಗರ್ ಈ ವ್ಯವಸ್ಥೆ ಮಾಡಿದ್ದು ಯಾವುದೇ ಕಂಪನಿ ಸಿಬಂದಿಗೆ ಈ ವಿಮಾನದಲ್ಲಿ ಮರಳಲು ಅವಕಾಶ ನೀಡಿರಲಿಲ್ಲ. ಇತ್ತೀಚೆಗೆ ಕರಾವಳಿ ಮೂಲದ ಉದ್ಯಮಿಗಳಿಗೆ ಸೇರಿದ ಎಕ್ಸ್ ಪರ್ಟೈಸ್ ಮತ್ತು ಅಲ್ ಮುಝೈನ್ ಕಂಪೆನಿಗಳು ತಮ್ಮ ಸಿಬಂದಿಯನ್ನು ತಾಯ್ನಾಡಿಗೆ ಮರಳಿಸಲು ವಿಮಾನ ಬುಕ್ ಮಾಡಿತ್ತು.
ಲಾಕ್ ಡೌನ್ ಕಾರಣದಿಂದ ಮೂರು ತಿಂಗಳಿಂದ ಸೌದಿ ಅರೇಬಿಯಾದಲ್ಲಿ ಸಿಕ್ಕಿಬಿದ್ದವರನ್ನು ತಮ್ಮ ಕುಟುಂಬದ ಜೊತೆ ಸೇರಿಸಿದ ತೃಪ್ತಿ ತಮಗಿದೆ ಎಂದು ಬಶೀರ್ ಈ ವೇಳೆ ಸ್ಮರಿಸಿದ್ದಾರೆ.