ಲಕ್ನೋ: ಮಹಿಳೆಯೊಬ್ಬಳು ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ ಎಂಟು ಹಿರಿಯ ನಾಗರಿಕರೊಂದಿಗೆ ಮದುವೆ ಆಗಿದ್ದಾಳೆ. ವಿವಾಹವಾದ ಕೆಲ ದಿನಗಳ ನಂತರ ನಗದು ಮತ್ತು ಆಭರಣಗಳ ಜೊತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‍ನಲ್ಲಿ ನಡೆದಿದೆ.
ಇತ್ತೀಚೆಗೆ ಘಾಜಿಯಾಬಾದ್‍ನ 66 ವರ್ಷದ ಕಟ್ಟಡ ನಿರ್ಮಾಣ ಗುತ್ತಿಗೆದಾರ ಮದುವೆಯಾಗಿ ಮೋಸ ಹೋಗಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಮೋನಿಕಾ ಮಲಿಕ್ ಎಂದು ಗುರುತಿಸಲಾಗಿದೆ.
ಘಾಜಿಯಾಬಾದ್‍ನ ಕವಿ ನಗರ ಪ್ರದೇಶದ ನಿವಾಸಿ ಜುಗಲ್ ಕಿಶೋರ್ ಕಟ್ಟಡ ನಿರ್ಮಾಣ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಅವರ ಪತ್ನಿ ಸಾವನ್ನಪ್ಪಿದ್ದು, ಮಗ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದನು. ಇದರಿಂದ ಕಿಶೋರ್ ಅವರಿಗೆ ಒಂಟಿತನದ ನೋವು ಕಾಡುತ್ತಿತ್ತು. ಹೀಗಾಗಿ ಮತ್ತೊಂದು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆಗ ಖನ್ನಾ ವಿವಾಹ ಕೇಂದ್ರದ ಜಾಹೀರಾತೊಂದನ್ನು ನೋಡಿದ್ದಾರೆ. ಅದರಲ್ಲಿ ಹಿರಿಯ ನಾಗರಿಕರು ಮತ್ತು ವಿಚ್ಛೇದಿತ ವ್ಯಕ್ತಿಗಳಿಗೆ ವರ-ವಧು ಹುಡುಕಲಾಗುತ್ತದೆ ಎಂದು ಹೇಳಲಾಗಿತ್ತು.
ಆಗ ಕಿಶೋರ್ ಏಜೆನ್ಸಿಯನ್ನು ಸಂಪರ್ಕಿಸಿದ್ದಾರೆ. ಏಜೆನ್ಸಿಯ ಮಾಲೀಕ ಮಂಜು ಖನ್ನಾ, ನಿಮಗೆ ಸೂಕ್ತವಾದ ವಧು ಇದ್ದಾಳೆ ಎಂದು ಕಿಶೋರ್‌ಗಿಂತ 25 ವರ್ಷ ಕಡಿಮೆ ವಯಸ್ಸಿನ ಮೋನಿಕಾಳನ್ನು ಪರಿಚಯಿಸಿದ್ದಾನೆ. ಮೋನಿಕಾ ಕೂಡ ತನಗೂ ವಿಚ್ಛೇದನವಾಗಿದೆ ಎಂದು ಕಿಶೋರ್‌ಗೆ ತಿಳಿಸಿದ್ದಳು. ಹೀಗಾಗಿ ಇಬ್ಬರು ಪರಸ್ಪರ ಕೆಲವು ವಾರ ಮಾತನಾಡಿಕೊಂಡಿದ್ದಾರೆ. ನಂತರ ಆಗಸ್ಟ್ 2019ರಲ್ಲಿ ವಿವಾಹವಾಗಿದ್ದಾರೆ.
ಕವಿ ನಗರ ನಿವಾಸದಲ್ಲಿ ದಂಪತಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ ಎರಡು ತಿಂಗಳ ನಂತರ ಮೋನಿಕಾ ಆಭರಣ ಮತ್ತು ಹಣದೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದಾಳೆ. 2019 ಅಕ್ಟೋಬರ್ 26 ರಂದು ಮೋನಿಕಾ 15 ಲಕ್ಷ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳೊಂದಿಗೆ ಓಡಿಹೋಗಿದ್ದಾಳೆ ಎಂದು ಕಿಶೋರ್ ಆರೋಪಿಸಿದ್ದಾರೆ. ನಂತರ ಕಿಶೋರ್ ಏಜೆನ್ಸಿಯನ್ನು ಸಂಪರ್ಕಿಸಿದ್ದು, ಆಗ ಮಾಲೀಕರು ಕಿಶೋರ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ಕಿಶೋರ್‌ಗೆ, ಮೋನಿಕಾಳ ಮಾಜಿ ಪತಿಯ ಪರಿಯಚವಾಗಿದೆ. ಆತ ಕೂಡ ಇದೇ ರೀತಿ ಮೋಸ ಹೋಗಿರುವ ಬಗ್ಗೆ ತಿಳಿದುಕೊಂಡಿದ್ದಾರೆ.
ಕೊನೆಗೆ ಕಿಶೋರ್ ಪೊಲೀಸರನ್ನು ಸಂಪರ್ಕಿಸಿ ಮೋನಿಕಾ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮೋನಿಕಾ ಕಳೆದ 10 ವರ್ಷಗಳಲ್ಲಿ ಎಂಟು ಹಿರಿಯ ನಾಗರಿಕರನ್ನು ಮದುವೆ ಮಾಡಿಕೊಂಡು ಮೋಸ ಮಾಡಿದ್ದಾಳೆ ಎಂದು ಗೊತ್ತಾಯಿತು. ಮೋನಿಕಾ ವಿವಾಹದ ಕೆಲ ವಾರಗಳ ನಂತರ ನಗದು ಮತ್ತು ಆಭರಣಗಳು ಸೇರಿದಂತೆ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುತ್ತಾಳೆ. ಆಕೆಯ ಎಲ್ಲಾ ಮದುವೆಗಳನ್ನು ಖನ್ನಾ ವಿವಾಹ ಕೇಂದ್ರವೇ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಐಪಿಸಿ ಸೆಕ್ಷನ್ ಕಾಯ್ಡೆ ಅಡಿಯಲ್ಲಿ ಮೋನಿಕಾ, ಆಕೆಯ ಕುಟುಂಬ ಮತ್ತು ಖನ್ನಾ ವಿವಾಹ ಕೇಂದ್ರದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‍ಪಿ ಅಭಿಷೇಕ್ ವರ್ಮಾ ತಿಳಿಸಿದ್ದಾರೆ.