LATEST NEWS
ರಾಜಸ್ಥಾನದಲ್ಲಿ 100 ಯುನಿಟ್ ವಿದ್ಯುತ್ ಉಚಿತ: ಅಶೋಕ್ ಗೆಹಲೋತ್ ಘೋಷಣೆ

ಜೈಪುರ, ಜೂನ್ 01: ರಾಜಸ್ಥಾನದಲ್ಲಿ ಪ್ರತಿ ಮನೆಗಳಿಗೂ 100 ಯುನಿಟ್‌ಗಳ ಉಚಿತ ವಿದ್ಯುತ್‌ಅನ್ನು ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಬುಧವಾರ ಘೋಷಣೆ ಮಾಡಿದ್ದಾರೆ.
‘ತಿಂಗಳಿಗೆ 100 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಬಿಲ್ ಇರುವುದಿಲ್ಲ. ಅದಕ್ಕಿಂತಲೂ ಹೆಚ್ಚು ಬಳಕೆ ಮಾಡುವ ಕುಟುಂಬಗಳಿಗೆ ಮೊದಲ 100 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಅಂದರೆ, ಎಷ್ಟೇ ಬಿಲ್ ಬಂದರೂ ಮೊದಲ 100 ಯುನಿಟ್‌ಗೆ ವಿದ್ಯುತ್ ಶುಲ್ಕ ಪಾವತಿಸಬೇಕಾಗಿಲ್ಲ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ತಿಂಗಳಿಗೆ 200 ಯೂನಿಟ್ ವರೆಗೆ ವಿದ್ಯುತ್ ಬಳಸುವ ಮಧ್ಯಮ ವರ್ಗದ ಜನರಿಗೆ, ಮೊದಲ 100 ಯೂನಿಟ್ ಉಚಿತವಾಗಲಿದೆ. ಜತೆಗೆ 200 ಯುನಿಟ್‌ಗಳವರೆಗೆ ಸ್ಥಿರ ಶುಲ್ಕ, ಇಂಧನ ಸರ್ಚಾರ್ಜ್ ಮತ್ತು ಇತರ ಎಲ್ಲಾ ಶುಲ್ಕಗಳನ್ನು ಮನ್ನಾ ಮಾಡಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
ರಾಜಸ್ಥಾನದಾದ್ಯಂತ ಹಮ್ಮಿಕೊಳ್ಳಲಾಗಿರುವ ಹಣದುಬ್ಬರ ಪರಿಹಾರ ಶಿಬಿರಗಳಲ್ಲಿ ವ್ಯಕ್ತವಾದ ಅಭಿಪ್ರಾಯದ ಆಧಾರದಲ್ಲಿ ಉಚಿತ ವಿದ್ಯುತ್ ಯೋಜನೆಯನ್ನು ಘೋಷಣೆ ಮಾಡಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ. ಈ ಶಿಬಿರಗಳಲ್ಲಿ 10 ಪ್ರಮುಖ ಯೋಜನೆಗಳಿಗೆ ಜನರಿಂದ ನೋಂದಣಿ ಮಾಡಿಸಲಾಗುತ್ತಿದೆ. ಅದರಲ್ಲಿ ಉಚಿತ ವಿದ್ಯುತ್ ಯೋಜನೆಯೂ ಒಂದು.

ತಿಂಗಳಿಗೆ 100 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಗೆಹಲೋತ್ ಈ ವರ್ಷದ ಆರಂಭದಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಘೋಷಿಸಿದ್ದರು. ರಾಜಸ್ಥಾನದಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.