Connect with us

    LATEST NEWS

    1.5 ಲಕ್ಷ ಮೌಲ್ಯದ ಮಂಗಳ ಸೂತ್ರ ನುಂಗಿದ ಎಮ್ಮೆ…!

    ಮಹಾರಾಷ್ಟ್ರ, ಅಕ್ಟೋಬರ್ 05: ಎಮ್ಮೆಯೊಂದು ಆಕಸ್ಮಿಕವಾಗಿ ದುಬಾರಿ ಬೆಲೆಯ ಮಂಗಳ ಸೂತ್ರವನ್ನು ನುಂಗಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ವಾಶಿಮ್ ನಲ್ಲಿ ನಡೆದಿದೆ. ಈ ಚಿನ್ನದ ಮಂಗಳ ಸೂತ್ರದ ಬೆಲೆಯು ಅಂದಾಜು ರೂ.1.5 ಲಕ್ಷ ಆಗಿದ್ದು, 20 ಗ್ರಾಂ ತೂಕವನ್ನು ಹೊಂದಿದೆ ಎಂದು ವರದಿಯಾಗಿದೆ.

    ಮಹಿಳೆಯೊಬ್ಬರು ಸೋಯಾಬೀನ್ ಹಾಗೂ ಕಡಲೆಕಾಯಿ ಸಿಪ್ಪೆ ತುಂಬಿರುವ ತಟ್ಟೆಯೊಂದರಲ್ಲಿ ಒಡವೆಗಳನ್ನು ಇಟ್ಟು ಸ್ನಾನಕ್ಕೆ ತೆರಳಿದ್ದಾಗ ಈ ಘಟನೆಯು ನಡೆದಿದೆ. ಸ್ನಾನ ಮುಗಿದ ನಂತರ ಆ ಮಹಿಳೆಯು ಕಡಲೆಕಾಯಿ ಸಿಪ್ಪೆ ತುಂಬಿರುವ ತಟ್ಟೆಯನ್ನು ಎಮ್ಮೆಯ ಮುಂದೆ ಇರಿಸಿದ್ದಾರೆ. ಆಗ ಎಮ್ಮೆಯು ಕಡಲೆಕಾಯಿ ಸಿಪ್ಪೆಯನ್ನು ತಿನ್ನಲು ತೊಡಗಿದೆ.

    ಕೆಲವು ಗಂಟೆಗಳ ನಂತರವಷ್ಟೇ ಆ ಮಹಿಳೆಗೆ ತನ್ನ ಒಡವೆಗಳು ಕಾಣೆಯಾಗಿರುವ ಕುರಿತು ಅರಿವಾಗಿದೆ. ಆಗ ನಡೆದ ಘಟನೆಯನ್ನು ಮೆಲುಕು ಹಾಕಿರುವ ಆ ಮಹಿಳೆಯು, ತಾನು ಮೇವಿನೊಂದಿಗೆ ಮಂಗಳ ಸೂತ್ರವನ್ನೂ ಇರಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಆ ಮಂಗಳ ಸೂತ್ರವನ್ನು ಎಮ್ಮೆಯು ನುಂಗಿದೆ ಎಂಬುದು ಮನದಟ್ಟಾದಾಗ, ಆ ಮಹಿಳೆಯು ಈ ಕುರಿತು ತನ್ನ ಪತಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ದಂಪತಿಗಳು ಪಶುವೈದ್ಯರೊಬ್ಬರನ್ನು ಸಂಪರ್ಕಿಸಿದ್ದು, ಎಮ್ಮೆಯನ್ನು ಲೋಹ ಶೋಧಕದಿಂದ ತಪಾಸಣೆ ಮಾಡಿರುವ ಆ ಪಶುವೈದ್ಯರು, ಎಮ್ಮೆಯ ಹೊಟ್ಟೆಯಲ್ಲಿ ಮಂಗಳ ಸೂತ್ರ ಇರುವುದನ್ನು ದೃಢಪಡಿಸಿದ್ದಾರೆ. ಮರುದಿನ ಎಮ್ಮೆಗೆ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅದಕ್ಕೆ 60-65 ಹೊಲಿಗೆಗಳನ್ನು ಹಾಕಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾದ ನಂತರ, ಎಮ್ಮೆಯ ಹೊಟ್ಟೆಯಿಂದ ಮಂಗಳ ಸೂತ್ರವನ್ನು ಹೊರ ತೆಗೆಯಲಾಗಿದೆ.

    ಈ ಕುರಿತು ANI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ವಾಶಿಮ್ ನ ಆರೋಗ್ಯಾಧಿಕಾರಿ ಬಾಳಾಸಾಹೇಬ್ ಕೌಂಡನೆ, “ಎಮ್ಮೆಯ ಹೊಟ್ಟೆಯಲ್ಲಿ ಯಾವುದೋ ಲೋಹವಿದೆ ಎಂಬ ಸಂಗತಿಯನ್ನು ಲೋಹ ಶೋಧಕವು ದೃಢಪಡಿಸಿತು. ಎಮ್ಮೆಗೆ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅದಕ್ಕೆ 60-65 ಹೊಲಿಗೆಗಳನ್ನು ಹಾಕಲಾಗಿದೆ” ಎಂದು ತಿಳಿಸಿದ್ದಾರೆ.

    ಪ್ರಾಣಿಗಳಿಗೆ ಮೇವನ್ನಾಗಲಿ ಅಥವಾ ಇನ್ನೇನನ್ನಾದರಾಗಲಿ ತಿನ್ನಿಸುವ ಜಾನುವಾರುಗಳ ಮಾಲಕರು ಒಂದಿಷ್ಟು ಎಚ್ಚರಿಕೆ ವಹಿಸಬೇಕು ಎಂದು ಕೌಂಡನೆ ಆಗ್ರಹಿಸಿದ್ದಾರೆ. “ಪ್ರಾಣಿಗಳಿಗೆ ಮೇವನ್ನು ತಿನ್ನಿಸುವಾಗ ಜನರು ಎಚ್ಚರಿಕೆಯಿಂದ ಇರಬೇಕು ಹಾಗೂ ಮೇವಿನಲ್ಲಿ ಮತ್ತೇನೂ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇವೆ” ಎಂದು ಅವರು ಕರೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply