BANTWAL
ವಿಟ್ಲದಲ್ಲಿ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ತಟ್ಟಿದ ಗ್ರಹಣ, ಕಾರ್ಯಾಧ್ಯಕ್ಷನ ರಾಜಕೀಯ ಹೇಳಿಕೆಗೆ ಬೇಸತ್ತಿತೇ ಸಾಹಿತ್ಯ ಗಣ
ವಿಟ್ಲದಲ್ಲಿ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ತಟ್ಟಿದ ಗ್ರಹಣ, ಕಾರ್ಯಾಧ್ಯಕ್ಷನ ರಾಜಕೀಯ ಹೇಳಿಕೆಗೆ ಬೇಸತ್ತಿತೇ ಸಾಹಿತ್ಯ ಗಣ
ವಿಟ್ಲ,ಫೆಬ್ರವರಿ 12: ವಿಟ್ಲದ ಪುಣಚ ಶ್ರೀದೇವಿ ಪ್ರೌಢಶಾಲೆಯಲ್ಲಿ ಫೆಬ್ರವರಿ 24 ರಂದು ನಡೆಯಬೇಕಿದ್ದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರಂಭಿಕ ವಿಘ್ನ ಎದುರಾಗಿದೆ.
ಸಮ್ಮೇಳನದ ಕಾರ್ಯಾಧ್ಯಕ್ಷತೆಯನ್ನು ವಹಿಸಿರುವ ಕಾಂಗ್ರೇಸ್ ಮುಖಂಡ ಎಂ.ಎಸ್.ಮಹಮ್ಮದ್ ತನ್ನ ರಾಜಕೀಯ ನಾಲಗೆಯನ್ನು ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಹರಿಯಬಿಟ್ಟ ಹಿನ್ನಲೆಯಲ್ಲಿ ಇವರ ಹೇಳಿಕೆಯನ್ನು ವಿರೋಧಿಸಿ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸಮ್ಮೇಳನಾ ಸಮಿತಿಯ ಬಹುತೇಕ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.
ಫೆಬ್ರವರಿ 24 ಕ್ಕೆ ವಿಟ್ಲದಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಾಗಿದ್ದು, ಈ ಕುರಿತ ಆಮಂತ್ರಣ ಪತ್ರಿಕೆ ಸೇರಿದಂತೆ ಎಲ್ಲಾ ಕಾರ್ಯಗಳೂ ಬಹುತೇಕ ಮುಕ್ತಾಯದ ಹಂತದಲ್ಲಿತ್ತು.
ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದ ಎಂ.ಎಸ್.ಮಹಮ್ಮದ್ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ವಿಟ್ಲದ ಶ್ರೀದೇವಿ ವಿದ್ಯಾಕೇಂದ್ರದ ವಿರುದ್ಧ ಕಿಡಿ ಕಾರಿದ್ದರು.
ಕೊಲ್ಲೂರು ದೇವಸ್ಥಾನದಿಂದ ಬರುತ್ತಿದ್ದ ಅನ್ನದಾನವನ್ನು ಸರಕಾರ ನಿಲ್ಲಿಸಿದ ಬಳಿಕ ಬಿಸಿಯೂಟದ ವ್ಯವಸ್ಥೆಯನ್ನು ಈ ಎರಡೂ ಶಾಲೆಗಳಿಗೆ ಮಾಡುವುದಾಗಿ ಸರಕಾರ ಹೇಳಿತ್ತು.
ಆದರೆ ಈ ಎರಡೂ ಶಾಲೆಗಳು ಸರಕಾರದ ಮನವಿಯನ್ನು ತಿರಸ್ಕರಿಸಿದೆ. ಇದು ಈ ವಿದ್ಯಾಸಂಸ್ಥೆಗಳ ನೀಚ ರಾಜಕಾರಣ ಎಂದು ಎಂ.ಎಸ್.ಮಹಮ್ಮದ್ ತನ್ನ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ಎಂ.ಎಸ್. ಮಹಮ್ಮದ್ ಕಾರ್ಯಾಧ್ಯಕ್ಷರಾಗಿರುವ ವಿಟ್ಲದಲ್ಲಿ ನಡೆಯುವ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲು ಬೇಕಾದ ಎಲ್ಲಾ ಸಹಕಾರಗಳನ್ನು ಶ್ರೀದೇವಿ ವಿದ್ಯಾಸಂಸ್ಥೆ ನೀಡಿದ್ದು, ಇವರ ಈ ರೀತಿಯ ಹೇಳಿಕೆಯಿಂದ ಸಂಸ್ಥೆ ಸಾಹಿತ್ಯ ಸಮ್ಮೇಳನ ವ್ಯವಸ್ಥೆಯಿಂದ ದೂರು ಉಳಿಯಲು ತೀರ್ಮಾನಿಸಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಅಲ್ಲದೆ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿರುವ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿಯೂ ಆಗಿರುವ ಗಂಗಮ್ಮ ಈಗಾಗಲೇ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆಯನ್ನು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಪ್ರತಿಭಾ ಶ್ರೀಧರ್ ಅವರಿಗೆ ನೀಡಿದ್ದಾರೆ.
ಅಲ್ಲದೆ ಇನ್ನೂ ಹಲವು ಸದಸ್ಯರು ಈಗಾಗಲೇ ರಾಜೀನಾಮೆ ನೀಡಲು ಮುಂದೆ ಬಂದಿದ್ದಾರೆ.
ಪಕ್ಷಭೇಧ ಮರೆತು ನಡೆಯಬೇಕಿದ್ದ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸ್ಥಳೀಯರ ವಿರೋಧ ಕಟ್ಟಿಕೊಳ್ಳಬೇಕಾದ ಸ್ಥಿತಿ ಇದೀಗ ನಿರ್ಮಾಣಗೊಂಡಿದೆ.
ಶ್ರೀದೇವಿ ವಿದ್ಯಾಸಂಸ್ಥೆಯ ಹಿತೈಷಿಗಳೂ ಸಮ್ಮೇಳನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದು, ಸಮ್ಮೇಳನದ ಕಾರ್ಯಕ್ರಮಕ್ಕೆ ಈಗಾಗಲೇ ನಿಗದಿಯಾಗಿದ್ದ ಅತಿಥಿಗಳು, ಭಾಷಣಕಾರರು, ಸನ್ಮಾನ ಸ್ವೀಕರಿಸುವವರು, ನಿರೂಪಣೆ ಮಾಡುವವರು ಎಲ್ಲರೂ ಕಾರ್ಯಕ್ರಮದಿಂದ ದೂರ ಉಳಿಯಲಿದ್ದು, ಒಂದು ವೇಳೆ ಸಮ್ಮೇಳನ ನಡೆದರೂ ಇದು ಕಾಂಗ್ರೇಸ್ ಪಕ್ಷದ ಸಾಹಿತ್ಯ ಸಮ್ಮೇಳನದಂತೆ ಆಗಲಿದೆ.