DAKSHINA KANNADA
ಪುತ್ತೂರಿನ ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನಲ್ಲೊಂದು ನ್ಯಾಪ್ಕಿನ್ ಡಂಪಿಗ್ ಯಾರ್ಡ್……
ಪುತ್ತೂರು,ಅಗಸ್ಟ್1: ಸರಕಾರ ಘೋಷಿಸುವ ಹಲವು ಯೋಜನೆಗಳು ಅವುಗಳ ಸಮರ್ಪಕ ಅನುಷ್ಟಾನದ ಸಮಸ್ಯೆಯಿಂದ ವಿಫಲವಾಗುವುದು ಸಾಮಾನ್ಯವಾಗಿದೆ. ಅಂತಹ ಒಂದು ಯೋಜನೆ ಬಡ ಹೆಣ್ಣು ಮಕ್ಕಳಿಗೆ ಸರಕಾರದ ವತಿಯಿಂದ ಉಚಿತವಾಗಿ ನೀಡಲಾಗುವ ನ್ಯಾಪ್ಕಿನ್ ಯೋಜನೆ. ಪುತ್ತೂರು ತಾಲೂಕಿನ 12 ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗಾಗಿ ಲಕ್ಷಾಂತರ ಮೌಲ್ಯದ ನ್ಯಾಪ್ಕಿನ್ ಗಳು ಇದೀಗ ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯರ್ಥವಾಗುತ್ತಿದ್ದು, ಇತರ ಕಾಲೇಜುಗಳಿಗೆ ಸರಕಾರದ ಯಾವುದೇ ಆದೇಶ ಇಲ್ಲದ ಹಿನ್ನಲೆಯಲ್ಲಿ ಯಾವ ಕಾಲೇಜುಗಳೂ ಈ ನ್ಯಾಪ್ಕಿನ್ ಗಳನ್ನು ಕೊಂಬೆಟ್ಟು ಕಾಲೇಜಿನಿಂದ ಕೊಂಡೊಯ್ಯಲು ಹಿಂದೇಟು ಹಾಕುತ್ತಿರುವುದೇ ಇದಕ್ಕೆ ಕಾರಣವಾಗಿದೆ.ಸರಕಾರ ಶಾಲೆ ಹಾಗೂ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರದ ವತಿಯಿಂದಲೇ ನ್ಯಾಪ್ಕಿನ್ ಗಳನ್ನು ಉಚಿತವಾಗಿ ವಿತರಿಸುವ ಜನಪರ ಯೋಜನೆಯನ್ನು ಆರಂಬಿಸಿದ್ದರೂ, ಅದನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿಲ್ಲವೇ ಎನ್ನುವ ಸಂಶಯ ಇದೀಗ ಕಾಡತೊಡಗಿದೆ. ಪುತ್ತೂರು ತಾಲೂಕಿನ 12 ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿನಿಯರಿಗೆ ವಿತರಿಸಲು ಬಂದಿರುವಂತಹ ನ್ಯಾಪ್ಕಿನ್ ಗಳು ಇಂದು ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಂಪ್ ಆಗುತ್ತಿವೆ. ಕಾಲೇಜಿಗೆ ಬರುವ ನ್ಯಾಪ್ಕಿನ್ ಗಳನ್ನು ಕಾಲೇಜಿನ ವಿದ್ಯಾರ್ಥಿನಿಗಳು ಉಪಯೋಗಿಸುತ್ತಿದ್ದು, ಉಳಿದ ನ್ಯಾಪ್ಕಿನ್ ಗಳು ಬಳಕೆಯಾಗದೆ ಹಾಳಾಗುತ್ತಿದೆ. ಪುತ್ತೂರು ತಾಲೂಕಿನ 12 ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಬೇಕಾದಂತಹ ನ್ಯಾಪ್ಕಿನ್ ಗಳನ್ನು ಕೊಂಬೆಟ್ಟು ಕಾಲೇಜಿನಲ್ಲಿ ಶೇಖರಣೆ ಮಾಡಲಾಗುತ್ತಿದ್ದರೂ, ಆ ಕಾಲೇಜುಗಳಿಗೆ ಶಿಕ್ಷಣ ಇಲಾಖೆಯಿಂದ ಕೊಂಬೆಟ್ಟು ಕಾಲೇಜಿನಿಂದ ನ್ಯಾಪ್ಕಿನ್ ಗಳನ್ನು ಪಡೆಯಬೇಕು ಎನ್ನುವ ಯಾವುದೇ ಆದೇಶ ಇಂದಿನವರೆಗೂ ರವಾನೆಯಾಗಿಲ್ಲ. ಈ ಕಾರಣದಿಂದಾಗಿ 12 ಕಾಲೇಜುಗಳಿಗೆ ಬೇಕಾದ ನ್ಯಾಪ್ಕಿನ್ ಗಳೆಲ್ಲಾ ಕೊಂಬೆಟ್ಟು ಕಾಲೇಜಿನಲ್ಲಿ ಎಲ್ಲೆಂದರಲ್ಲಿ ಶೇಖರಣೆಯಾಗುತ್ತಿದ್ದು, ಶಿಕ್ಷಣ ಇಲಾಖೆಯ ಬೇಜಾವಬ್ದಾರಿಯಿಂದಾಗಿ ಈ ಅವ್ಯವಸ್ಥೆ ಉಂಟಾಗಿದೆ.
ಕೊಂಬೆಟ್ಟು ಕಾಲೇಜಿನ ಸಿಬ್ಬಂದಿವರ್ಗ ಈಗಾಗಲೇ ಹಲವು ಕಾಲೇಜುಗಳಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದರೂ, ಯಾವ ಕಾಲೇಜುಗಳೂ ಶಿಕ್ಷಣ ಇಲಾಖೆಯ ಅನುಮತಿಯಿಲ್ಲದ ಕಾರಣ ನ್ಯಾಪ್ಕಿನ್ ಗಳನ್ನು ಪಡೆಯಲು ಹಿಂದೇಟು ಹಾಕುತ್ತಿದೆ. ಲೋಡುಗಟ್ಟಲೆ ನ್ಯಾಪ್ಕಿನ್ ಗಳು ಇದೀಗ ಕಾಲೇಜಿನಲ್ಲಿ ಡಂಪ್ ಆಗಿದ್ದು, ಬಡ ವಿದ್ಯಾರ್ಥಿನಿಯರಿಗೆ ತಲುಪಬೇಕಾದ ವ್ಯವಸ್ಥೆ ಮಣ್ಣು ಪಾಲಾಗುತ್ತಿದೆ.