ಮಂಗಳೂರು,ಆಗಸ್ಟ್ 01: ವಿದ್ಯಾರ್ಥಿನಿ ಕಾವ್ಯ ಪೂಜಾರಿ ಆತ್ಮಹತ್ಯೆ ಪ್ರಕರಣ ದಿನೇ ದಿನೆ ಗಂಭೀರ ಸ್ವರೂಪ ಪಡೆದು ಕೊಳ್ಳುತ್ತಿದೆ. ಇಂದು ಮುಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಮಹಿಳಾ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ್ ಆಳ್ವಾ ಅವರ ವಿಚಾರಣೆ ನಡೆಸಿತು. ಆಳ್ವಾರಿಂದ ಪ್ರಕರಣದ ಕುರಿತು ತನಿಖಾ ಸಮಿತಿ ವಿವರವಾಗಿ ಹೇಳಿಕೆ ಪಡೆದುಕೊಂಡಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಬೇಜವಾಬ್ದಾರಿಗೆ ಅಧ್ಯಕ್ಷ ವಿ.ಎಸ್ ಉಗ್ರಪ್ಪ ಆಳ್ವಾಸ್ ಆಡಳಿತ ಮಂಡಳಿ ವಿರುದ್ದ ಕಿಡಿಕಾರಿದ್ದಾರೆ.
ನಂತರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಿತಿ ಸದಸ್ಯರೊಂದಿಗೆ ಆಧಿಕಾರಿಗಳ ತುರ್ತು ಸಭೆ ನಡೆಸಿದ ಅವರು, ಆಳ್ವಾಸ್ ಶಿಕ್ಷಣ ಸಂಸ್ಥೆ ಭೇಟಿ ವೇಳೆ ನನಗೆ ಆಘಾತಕಾರಿ ಮಾಹಿತಿಗಳು ಲಭ್ಯವಾಗಿದೆ. ಪ್ರಾರ್ಥಮಿಕ ಮಾಹಿತಿಗಳ ಪ್ರಕಾರ ಕಾವ್ಯಳದ್ದು ಅಸ್ವಾಭಾವಿಕ ಸಾವು ಅಂತ ಕಾಣುತ್ತದೆ ಮತ್ತು ಆಡಳಿತ ಮಂಡಳಿ ನಿರ್ಲಕ್ಷ್ಯ ಇದರಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.ಜಿಲ್ಲಾಡಳಿತ ಹಾಗೂ ಆಳ್ವಾಸ್ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಒಂದು ಮಗು ಪ್ರಾಣ ಕಳಕೊಳ್ಳಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಳ್ವಾಸ್ ಸಂಸ್ಥೆಗೆ ವಸತಿ ಶಾಲೆ ನಡೆಸುವ ಯಾವುದೇ ಅನುಮತಿಯಿಲ್ಲ, 26 ಸಾವಿರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿನ ಶಾಲೆ, ಕಾಲೇಜುಗಳು ಮತ್ತು ಹಾಸ್ಟೆಲ್ ಗಳು ಎಲ್ಲವೂ ಕಾನೂನು ಬಾಹಿರವಾಗಿ ನಡೆಯುತ್ತಿವೆ. ಯಾವುದೇ ಸುರಕ್ಷತಾ ಅಥವಾ ಭದ್ರತಾ ಕ್ರಮಗಳನ್ನು ಸಂಸ್ಥೆ ಪಾಲಿಸಿಲ್ಲ.ಕೇವಲ 7,500 ರೂಪಾಯಿ ಅತೀ ಕಡಿಮೆ ಸಂಬಳಕ್ಕೆ ಸಿಬಂದಿಗಳನ್ನು ವರ್ಷದ 365 ದಿನಗಳ ಕಾಲ ದುಡಿಸುತ್ತಿದೆ ಆದರೆ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಏನು ಕ್ರಮ ಕೈ ಗೊಂಡಿದೆ ಎಂದು ಜಿಲ್ಲಾಧಿಕಾರಿ ಸಹಿತ ಸಂಬಂಧಿಸಿದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಉಗ್ರಪ್ಪರು, ಅಧಿಕಾರಿಗಳ ಮೇಲೆ ಕ್ರಮಕ್ಕೆ ಸರ್ಕಾರಕ್ಕೆ ಬರೆಯುವುದಾಗಿ ಎಚ್ಚರಿಸಿದರು. ಆಳ್ವಾಸ್ ಸಂಸ್ಥೆಯ ಮೇಲಿನ ಎಲ್ಲಾ ಪ್ರಕರಣಗಳ ಕುರಿತು ಜಿಲ್ಲಾಡಳಿತ ಸಮಿತಿ ರಚಿಸಿ ಸ್ಥಳ ಪರಿಶೀಲನೆ ಮಾಡಿ 3 ವಾರದೊಳಗೆ ಸಮಿತಿಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಆಳ್ವಾಸ್ ಸಂಸ್ಥೆಯ ಲೋಪದಿಂದ ಕಾವ್ಯ ಪ್ರಾಣ ಕಳಕೊಳ್ಳಬೇಕಾಯಿತು. ಈ ಹಿನ್ನೆಲೆಯಲ್ಲಿ ಕಾವ್ಯ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸೂಚನೆ ನೀಡಿದರು. ಸಭೆಯಲ್ಲಿ ಉಗ್ರಪ್ಪ ಅವರ ವಾಗ್ದಾಳಿಗೆ ಬೆದರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಅಸ್ವಸ್ಥಗೊಂಡು ಕುಸಿದು ಬಿದ್ದರು. ಕೂಡಲೇ ಇತರ ಅಧಿಕಾರಗಳು ಅವರನ್ನು ಎತ್ತಿ ಸಭಾಂಗಣದಿಂದ ಹೊರತಂದು ಆಸ್ಪತ್ರೆಗೆ ದಾಖಲಿಸಿದರು. ವರ್ಷದ ಹಿಂದೆ ಕೂಡಾ ಉಗ್ರಪ್ಪರ ಉಗ್ರವತಾರಕ್ಕೆ ಇದೇ ಅಧಿಕಾರಿ ಕುಸಿದುಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು.

ಕಾವ್ಯಾ ಕುಟುಂಬವನ್ನು ಭೇಟಿ ಮಾಡಿದ ದೌರ್ಜನ್ಯ ತಡೆ ಸಮಿತಿ; ಸಭೆಯ ಬಳಿಕ ಕಾವ್ಯಾ ಕುಟುಂಬವನ್ನು ಭೇಟಿ ಮಾಡಿದ ಮಕ್ಕಳ ಮತ್ತು ಮಹಿಳಾ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ನೇತ್ರತ್ವದ ಸಮಿತಿ, ಕಾವ್ಯಳ ಹೆತ್ತವರ ಅಳಲನ್ನು ತಾಳ್ಮೆಯಿಂದ ಆಲಿಸಿದರು. ಈ ಸಂದರ್ಭದಲ್ಲಿ ಇಲ್ಲಿನ ಪೋಲಿಸರ ಮೇಲೆ ನಂಬಿಕೆ ಕಳಕೊಂಡಿದ್ದೇವೆ, ನ್ಯಾಯ ಸಿಗುವ ಭರವಸೆ ಇಲ್ಲ ಎಂದ ಹೆತ್ತವರ ಅಳಲಿಗೆ ಸಮಾಧಾನಪಡಿಸಿದ ಉಗ್ರಪ್ಪ ನಿಸ್ಪಕ್ಷಪಾತವಾದ ತನಿಖೆ ನಡೆಸಿ ಸೂಕ್ತ ನ್ಯಾಯವನ್ನು ದೊರಕಿಸುವ ಭರವಸೆ ನೀಡಿದರು.

ಉಗ್ರಪ್ಪನ ಪ್ರತಾಪದ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕನ್ನು ಒತ್ತಿರಿ..