DAKSHINA KANNADA
ರಾಜ್ಯ ಸರಕಾರದಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ – ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು, ಮೇ 19: ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ 1.37 ಕೋಟಿ ವೆಚ್ಚದಲ್ಲಿ ವಿಎಸ್ಎ ತಂತ್ರಜ್ಞಾನವುಳ್ಳ 500 ಎಲ್.ಪಿ.ಎಂ ಸಾಮರ್ಥ್ಯದ ಆನ್ ಸೈಟ್ ಆಕ್ಸಿಜನ್ ಜನರೇಟರ್ ಯುನಿಟ್ ನಿರ್ಮಾಣ ಕಾಮಗಾರಿ ನಾಳೆಯಿಂದ ಪ್ರಾರಂಭವಾಗಲಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣದ ಸ್ಥಳ ವೀಕ್ಷಣೆ ನಡೆಸಿ ಮಾತನಾಡಿದ ಶಾಸಕ ಕಾಮತ್, ಪ್ರಾಯೋಗಿಕವಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ 10 ಜಿಲ್ಲಾ ಆಸ್ಪತ್ರೆಗಳಲ್ಲಿ ಪಿಎಸ್ಎ ತಂತ್ರಜ್ಞಾನವುಳ್ಳ 500 ಎಲ್.ಪಿ.ಎಂ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕ ಅಳವಡಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಆ ನಿಟ್ಟಿನಲ್ಲಿ ನಾಳೆಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕದ ನಿರ್ಮಾಣ ಕಾಮಗಾರಿಗಳು ಪ್ರಾರಂಭವಾಗಲಿದೆ ಎಂದರು.
ಈಗಾಗಲೇ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿಶೇಷ ಪ್ರಯತ್ನದಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ.ಆರ್.ಪಿ.ಎಲ್ ಸಂಸ್ಥೆಯ ಸಿಆರ್ ಎಫ್ ನಿಧಿಯಲ್ಲಿ 2 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಹಾಗಾಗಿ ಇನ್ನು ಕೆಲವೇ ದಿನಗಳಲ್ಲಿ 2 ಆಕ್ಸಿಜನ್ ಪ್ಲಾಂಟ್`ಗಳೂ ಕೂಡ ಜನರ ಸೇವೆಗೆ ಲಭ್ಯವಾಗಲಿದೆ. ಈ ಹಿಂದೆ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತಿನಿತ್ಯ 2.5 ಕೆ.ಎಲ್ ಆಕ್ಸಿಜನ್ ಸಾಕಾಗುತಿತ್ತು. ಆದರೆ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದ್ದು ಸರಿಸುಮಾರು 5 ಕೆ.ಎಲ್ ಆಕ್ಸಿಜನ್ ಬೇಡಿಕೆಯಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಸದ್ಯ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೀಡುತ್ತಿರುವ ಆಮ್ಲಜನಕ ನಿರ್ಮಾಣ ಘಟಕದಿಂದ ವೆನ್ಲಾಕ್ ಆಸ್ಪತ್ರೆಗೆ ಆಕ್ಸಿಜನ್ ಸಂಪನ್ಮೂಲವನ್ನು ಒದಗಿಸಿದಂತಾಗಿದೆ. ಈ ಪ್ಲಾಂಟ್ ನಿರ್ಮಾಣದಿಂದ ಪ್ರತಿನಿತ್ಯ 1 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸಬಹುದು. ಇದರಿಂದಾಗಿ ಮೆಡಿಕಲ್ ಆಕ್ಸಿಜನ್ ಸರಬರಾಜುದಾರರ ಮೇಲೆ ಅವಲಂಬಿತವಾಗುವುದನ್ನು ಕಡಿಮೆಗೊಳಿಸಬಹುದಾಗಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಆಕ್ಸಿಜನ್ ಉತ್ಪಾದನಾ ಘಟಕವನ್ನು ವೆನ್ಲಾಕ್ ಆಸ್ಪತ್ರೆಗೆ ನೀಡಿದ ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಸಚಿವರಾದ ಡಾ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಶಾಸಕ ಕಾಮತ್ ಹೇಳಿದ್ದಾರೆ.
You must be logged in to post a comment Login